ಬೆಂಗಳೂರು, ಜೂ 23(DaijiworldNews/PY) : ರಾಜ್ಯದಲ್ಲಿ ಇನ್ನೊಮ್ಮೆ ಲಾಕ್ಡೌನ್ ಮಾಡುವ ಬಗ್ಗೆ ಚರ್ಚೆ ಮಾಡಲಾಗಿದೆ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮಲು ಹೇಳಿದ್ದಾರೆ.
ಮಂಗಳವಾರ ನಗರದಲ್ಲಿ ಕೆ.ಸಿ.ಜನರಲ್ ಆಸ್ಪತ್ರೆ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿವೆ. ಈ ಬಗ್ಗೆ ಸಿಎಂ ಅವರೊಂದಿಗೆ ಆರೋಗ್ಯ ಇಲಾಖೆ ಅಧಿಕಾರಿಗಳು, ವೈದ್ಯರು ಮಾತುಕತೆ ನಡೆಸಿದ್ದು, ಮತ್ತೊಮ್ಮೆ ಲಾಕ್ಡೌನ್ ಮಾಡುವ ಬಗ್ಗೆ ಕೂಡಾ ಚರ್ಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರತಿ ಜಿಲ್ಲೆಗೂ ಲ್ಯಾಬ್ ಸ್ಥಾಪನೆ ಮಾಡುವ ಬಗ್ಗೆ ತೀರ್ಮಾನಿಸಲಾಗಿದೆ. ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಲ್ಯಾಬ್ಗಳ ಸಂಖ್ಯೆಯನ್ನೂ ಹೆಚ್ಚು ಮಾಡಬೇಕಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸೆಗಾಗಿ ದರ ನಿಗದಿ ಮಾಡಲಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಮೊದಲ ಆದ್ಯತೆ. ಆದ್ಯತೆ ನೀಡಿ ಎಂದು ಮನವಿ ಮಾಡಿದರೆ ಮಾತ್ರ ರೋಗಿಗಳನ್ನು ಖಾಸಗಿ ಆಸ್ಪತ್ರೆಗೆ ಶಿಫಾರಸು ಮಾಡಲಾಗುತ್ತದೆ. ಎ ಲಕ್ಷಣ ಇರುವ ಪ್ರಕರಣಗಳು ಹೆಚ್ಚಾಗಿ ಇರುವ ಕಾರಣ ಅವರನ್ನು ಕೊರೊನಾ ಕೇರ್ ಸೆಂಟರ್ಗೆ ಕಳುಹಿಸಲಾಗುವುದು. ಸರ್ಕಾರವು ಕೊರೊನಾ ದೃಢಪಟ್ಟವರನ್ನು ನಿಗಾವಹಿಸಲಿದೆ. ಈಗಾಗಲೇ ಹಜ್ ಭವನ ಐಸಿಯು ಸಿದ್ದವಾಗಿದ್ದು, ಎ ಲಕ್ಷಣ ಇರುವ ಸೋಂಕಿತರನ್ನು ಅಲ್ಲಿಗೆ ಸ್ಥಳಾಂತರ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ನಿರ್ದೇಶನವಿಲ್ಲದೇ ಲಾಕ್ಡೌನ್ ಮಾಡುವುದಿಲ್ಲ. ತಜ್ಞರೊಂದಿಗೆ ಚರ್ಚೆ ಮಾಡಿ ಬೆಂಗಳೂರಿನಲ್ಲಿ ಸೀಲ್ಡೌನ್ ವಾರ್ಡ್ ಮಾಡಬೇಕೆ? ಅಥವಾ ವಿಧಾನಸಭಾ ಕ್ಷೇತ್ರವಾರು ಸೀಲ್ಡೌನ್ ಮಾಡಬೇಕೆ ಎನ್ನುವ ವಿಚಾರವಾಗಿ ಅವರ ವರದಿಯ ಆಧಾರದ ಮೇಲೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯವನ್ನು ಕೇಂದ್ರ ಸರ್ಕಾರ ನಿಮಿಷಕ್ಕೊಮ್ಮೆ ಗಮನಿಸುತ್ತಲೇ ಇರುತ್ತದೆ. ಇದೇನು ತುಘಲಕ್ ಸರ್ಕಾರ ಅಲ್ಲ. ಸರ್ಕಾರವು ತಜ್ಞರ ಸಮಿತಿಯ ವರದಿ ಆಧಾರದ ಮೇಲೆ ಕ್ರಮಕೈಗೊಳ್ಳುತ್ತದೆ. ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಅಲ್ಲದೇ, ಏರಿಯಾ ಬಂಚ್ ಲಾಕ್ಡೌನ್ ಬಗ್ಗೆಯೂ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.