ಬೆಂಗಳೂರು, ಜೂ. 23 (DaijiworldNews/SM): ಐಎಂಎ ಹಗರಣದ ಪ್ರಕರಣದಲ್ಲಿ ಅಮಾನತುಗೊಂಡು ಎಸ್ ಐಟಿ ಬಂಧನಕ್ಕೆ ಒಳಗಾಗಿರುವ ಐಎಎಸ್ ಅಧಿಕಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ವಿಜಯ್ ಶಂಕರ್ ಆತ್ಮಹತ್ಯೆಗೆ ಶರಣಾದವರು.
ನಗರದ ಜಯನಗರ ನಿವಾಸದಲ್ಲಿ ವಿಜಯ್ ಶಂಕರ್ ಮೃತ ದೇಹ ಪತ್ತೆಯಾಗಿದ್ದು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಐಎಂಎ ಹಗರಣದ ಪ್ರಕರಣದಲ್ಲಿ ವಿಜಯ್ ಶಂಕರ್ ಅಮಾನತುಗೊಂಡಿದ್ದರು. ಅಲ್ಲದೆ, ಎಸ್ಐಟಿಯಿಂದ ಬಂಧನಕ್ಕೊಳಗಾಗಿದ್ದರು. ಬೆಂಗಳೂರಿನ ಜಿಲ್ಲಾಧಿಕಾರಿಯಾಗಿದ್ದ ವಿಜಯ್ ಶಂಕರ್ ಹೆಸರು ಐಎಂಎ ಹಗರಣದಲ್ಲಿ ಕೇಳಿ ಬಂದಿತ್ತು.
ಬೆಂಗಳೂರು ಉತ್ತರ ಉಪವಿಭಾಗಾಧಿಕಾರಿ ಎಲ್.ಸಿ.ನಾಗರಾಜ್ ಹೇಳಿಕೆ ನೀಡಿದ್ದರು. ಅವರ ಹೇಳಿಕೆಯ ಆಧಾರದಲ್ಲಿ ಲಂಚ ಪಡೆದ ಆರೋಪದಲ್ಲಿ 2019ರ ಜುಲೈ 8ರಂದು ವಿಜಯ್ ಶಂಕರ್ ಅವರನ್ನ ಎಸ್ಐಟಿ ಬಂಧಿಸಿತ್ತು. ಬಳಿಕ ಅವರು ಜಾಮೀನುಪಡೆದುಕೊಂಡು ಬಿಡುಗಡೆಗೊಂಡಿದ್ದರು ಎಂದು ತಿಳಿದುಬಂದಿದೆ.