ನವದೆಹಲಿ, ಜೂ 24(Daijiworld News/MSP): ಕೇವಲ 7 ದಿನಗಳಲ್ಲಿ ಕೋವಿಡ್–19 ಗುಣಪಡಿಸಲಿದೆ ಎಂದು ಪತಂಜಲಿ ಸಂಸ್ಥೆ ಬಿಡುಗಡೆ ಮಾಡಿರುವ ಕೊರೊನಿಲ್ ಮತ್ತು ಸ್ವಾಸರಿ ಎಂಬ ಮಾತ್ರೆ ಮತ್ತು ಔಷಧ ಒಳಗೊಂಡಿರುವ ಕೊರೊನಾ ಕಿಟ್ ಕುರಿತು ಜಾಹೀರಾತು ನೀಡಬಾರದು ಎಂದು ಆಯುಷ್ ಸಚಿವಾಲಯ ತಾಕೀತು ಮಾಡಿದೆ.
ಈ ಪ್ರತಿಪಾದನೆಯ ಹಿಂದಿನ ವಿವರ ಹಾಗೂ ವೈಜ್ಞಾನಿಕ ಅಧ್ಯಯನ, ಸಂಶೋಧನೆಯ ಮಾಹಿತಿ, ಔಷಧದ ಪ್ರಯೋಗ ನಡೆದ ಆಸ್ಪತ್ರೆ, ಸ್ಥಳ, ಬಳಸಲಾದ ಔಷಧದ ಪ್ರಮಾಣ ಕುರಿತ ವಿವರಗಳನ್ನು ಸರ್ಕಾರ ಪರಿಶೀಲನೆ ನಡೆಸಿ ಅದರ ಬಳಿಕವೇ ಮಾರುಕಟ್ಟೆ ಬಿಡುಗಡೆ ಮಾಡಬೇಕು ಎಂದು ಸಚಿವಾಲಯ ಸೂಚಿಸಿದೆ.
ಜಗತ್ತಿನಾದ್ಯಂತ ವಿಜ್ಞಾನಿಗಳು ಮಹಾಮಾರಿ ಕೊರೊನಾಗೆ ಔಷಧ ಪತ್ತೆ ಹಚ್ಚಲು ನಿರಂತರ ಸಂಶೋಧನೆಯಲ್ಲಿ ತೊಡಗಿರುವಾಗ ಯೋಗ ಗುರು ರಾಮ್ದೇವ್ ಅವರು, ಪತಂಜಲಿ ಸಂಸ್ಥೆ ಕೊರೊನಾ ಸೋಂಕನ್ನು ಶೇಕಡಾ 100 ಗುಣಪಡಿಸಬಲ್ಲ ಆಯುರ್ವೇದ ಔಷಧಿಯನ್ನು ಅಭಿವೃದ್ಧಿಪಡಿಸಿದೆ ಎಂದು ಹೇಳಿದ್ದರು.
ಮಂಗಳವಾರ ಸುದ್ದಿಗೋಷ್ಠಿ ನಡೆಸಿದ್ದ ಅವರು, ಕೊರೊನಿಲ್ ಔಷಧ ಇದು, ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವ ಔಷಧಿಯಲ್ಲ, ಕೊರೊನಾ ಸೋಂಕು ನಿವಾರಿಸುವ ಔಷಧ. ಇದನ್ನು ಕೋವಿಡ್ ಪೀಡಿತ ರೋಗಿಗಳ ಮೇಲೆ ಪ್ರಯೋಗಿಸಲಾಗಿದೆ .ಔಷಧಗಳು ಏಳು ದಿನಗಳಲ್ಲಿ ಶೇ.100ರಷ್ಟು ಫಲಿತಾಂಶ ನೀಡಿವೆ’ ಎಂದು ತಿಳಿಸಿದ್ದರು.