ಬೆಂಗಳೂರು, ಜೂ.24 (DaijiworldNews/MB) : ರಾಜ್ಯ ಸರ್ಕಾರವು ಯೂಟರ್ನ್ ಸರ್ಕಾರ. ಬೆಳಗ್ಗೆ ನೀಡಿದ ಹೇಳಿಕೆ ಸಂಜೆ ಬದಲಾಯಿಸುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ದೂರಿದ್ದಾರೆ.
ಜುಲೈ 2 ರಂದು ರಾಜ್ಯಾದ್ಯಂತ ನಡೆಯಲಿರುವ ಪ್ರತಿಜ್ಞಾ ದಿನ ಕಾರ್ಯಕ್ರಮದ ತಯಾರಿ ಭಾಗವಾಗಿ ಕರೆಯಲಾದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ನಾವು ಸಂಪೂರ್ಣವಾಗಿ ಸಹಕಾರ ನೀಡಿದರೂ ಕೂಡಾ ಸರ್ಕಾರಕ್ಕೆ ಜನರಿಗೆ ಸ್ಪಂಧಿಸಿ ಅವರ ಮನಸು ಗೆಲ್ಲಲು ಸಾಧ್ಯವಾಗಿಲ್ಲ. ರಾಜ್ಯ ಸರ್ಕಾರವು ಯೂಟರ್ನ್ ಸರ್ಕಾರ. ಬೆಳಗ್ಗೆ ನೀಡಿದ ಹೇಳಿಕೆ ಸಂಜೆ ಬದಲಾಯಿಸುತ್ತದೆ. ಅಧಿವೇಶನ ಕರೆಯಲಿ ಎಲ್ಲಾ ಬಹಿರಂಗ ಮಾಡುತ್ತೇವೆ. ಈ ಬಗ್ಗೆ ನಾನು, ನಮ್ಮ ನಾಯಕ ಸಿದ್ಧರಾಮಯ್ಯನವರು ಏನು ಹೇಳಬೇಕಾಗಿಲ್ಲ. ಮಾಧ್ಯಮಗಳೇ ಎಲ್ಲಾ ಜನರಿಗೆ ತಿಳಿಸುತ್ತದೆ ಎಂದು ಹೇಳಿದರು.
ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಕಾಯ್ದೆಯನ್ನು ಬದಲಾಯಿಸಲು ಮಾರ್ಗಸೂಚಿ ನೀಡಿದ್ದು ಬಿಜೆಪಿಯಿಂದ ಒಕ್ಕೂಟ ವ್ಯವಸ್ಥೆ ನಾಶ ಮಾಡುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು.
ದೇಶದಲ್ಲಿ ಅವೈಜ್ಞಾನಿಕವಾಗಿ ಇಂಧನ ಬೆಲೆ ಏರಿಕೆ ಮಾಡಲಾಗುತ್ತಿದ್ದು ಯಾರೂ ಕೂಡಾ ಈ ಬಗ್ಗೆ ಚಕಾರ ಎತ್ತುತ್ತಿಲ್ಲ. ಈಗಾಗಲೇ ಸಂಕಷ್ಟದಲ್ಲಿರುವ ಜನರಿದ್ದು ಈ ಸಂದರ್ಭದಲ್ಲಿ ಬೆಲೆ ಇಳಿಕೆ ಮಾಡಬೇಕು ಆದರೆ ಬಿಜೆಪಿ ದಾಖಲೆಯಲ್ಲಿ ಬೆಲೆ ಏರಿಕೆ ಮಾಡುವ ಮೂಲಕ ಜನ ವಿರೋಧಿ ಸರ್ಕಾರ ಎಂದು ಸಾಬೀತು ಮಾಡಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದು ಈ ಬಗ್ಗೆ ಕಾಂಗ್ರೆಸ್ ಯಾವ ರೀತಿ ಹೋರಾಟ ನಡೆಸುತ್ತದೆ ಎಂದು ತಿಳಿಸಲಾಗುವುದು ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಸರ್ಕಾರ ನಡೆಸುತ್ತಿದ್ದಾಗ ಉಳುವವನೇ ಭೂಮಿಯ ಒಡೆಯ ಎಂಬ ಕಾನೂನು ಜಾರಿಗೆ ತಂದು ಜನರಿಗೆ ಕೃಷಿ ಭೂಮಿ ನೀಡಿದೆ. ಆದರೆ ಈಗಿನ ಬಿಜೆಪಿ ಸರ್ಕಾರ ಆ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ರೈತರಿಗೆ ಮರಣ ಶಾಸನ ಬರೆಯುತ್ತಿದ್ದು ಈ ಮಧ್ಯೆ ಎಪಿಎಂಸಿ ಕಾಯ್ದೆ ತಿದ್ದುಪಡಿಗೂ ಹೊರಟಿದೆ. ಅಷ್ಟು ಮಾತ್ರವಲ್ಲದೆ ಅಂತಾರಾಷ್ಟ್ರೀಯ ಕಾರ್ಮಿಕ ಒಕ್ಕೂಟ ಹಾಗೂ ಅಧಿವೇಶನದಲ್ಲಿ ಚರ್ಚಿಸಿ ತಂದ ಕಾರ್ಮಿಕ ಕಾಯ್ದೆಯನ್ನು ಮೂರು ವರ್ಷ ರದ್ದು ಪಡಿಸಲು ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ 70 ವರ್ಷ ದೇಶಕ್ಕೆ ಏನು ಮಾಡಿದೆ ಎಂದು ಕೇಳುತ್ತಾರಲ್ಲವೇ, ಈ ಬಡವರು, ಕಾರ್ಮಿಕರಿಗೆ ಧ್ವನಿಯಾಗಿ, ಆರ್ಥಿಕ ಬಲ ತುಂಬಿ ದೇಶವನ್ನು ಕಟ್ಟಿದ್ದೇವೆ. ಇದು ದೇಶಕ್ಕೆ ಕಾಂಗ್ರೆಸ್ ಕೊಡುಗೆ ಎಂದು ಹೇಳಿದರು.