ತಿರುವನಂತಪುರಂ, ಜೂ 24(Daijiworld News/MSP): ದೇಶದಲ್ಲಿ ಕೊರೊನಾ ವೈರಸ್ ಮೊದಲಿಗೆ ಕಾಣಿಸಿಕೊಂಡ ರಾಜ್ಯ ಕೇರಳ. ವುಹಾನ್ನಿಂದ ಆಗಮಿಸಿದ್ದ ಮೂವರಲ್ಲಿ ಮೊದಲಿಗೆ ಸೋಂಕು ಕಾಣಿಸಿಕೊಂಡಿತ್ತು. ಆ ಬಳಿಕ ಕೊರೊನಾ ಸೋಂಕಿತರ ಸಂಖ್ಯೆ ಏಕಾಏಕಿ ಸ್ಪೋಟಗೊಂಡಿತ್ತು.ಕೊರೊನಾ ವೈರಸ್ ಕಾಣಿಸಿಕೊಂಡ ರಾಜ್ಯಗಳಲ್ಲಿ ಆರಂಭದಲ್ಲಿ ಮೊದಲ ಸ್ಥಾನದಲ್ಲಿದ್ದ ದೇವರ ನಾಡು' ಆ ಬಳಿಕ ಕೊರೊನಾ ಹಿಮ್ಮೆಟಿಸುವ ವ್ಯವಸ್ಥೆಯಲ್ಲಿ ಇಡೀ ದೇಶಕ್ಕೆ ಮಾದರಿಯಾಯಿತು.
ಕೊವೀಡ್ -19 ವಿರುದ್ದ ಸಮರ್ಥವಾಗಿ ಹೋರಾಟ ನಡೆಸುತ್ತಿರುವ ಕೇರಳ ರಾಜ್ಯದ ಕೆಲಸವನ್ನು ವಿಶ್ವಸಂಸ್ಥೆ ಗುರುತಿಸಿದ್ದು, ಈ ಹಿನ್ನಲೆಯಲ್ಲಿ ಕೇರಳದ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಟೀಚರ್ ಅವರನ್ನು ವಿಶ್ವಸಂಸ್ಥೆಯ ಸಾರ್ವಜನಿಕ ಸೇವಾ ದಿನಾಚರಣೆಯ ವರ್ಚುವಲ್ ಸಮಾವೇಶದಲ್ಲಿ ಪ್ರಮುಖ ಪ್ಯಾನೆಲ್ ಭಾಷಣಕಾರರನ್ನಾಗಿ ಆಮಂತ್ರಿಸಿತ್ತು.
ಕೊವೀಡ್ ವಿರುದ್ಧ ಯಶಸ್ವಿಯಾಗಿ ಹೋರಾಡುತ್ತಿರುವ ಹಲವು ದೇಶಗಳ ಗಣ್ಯರನ್ನು ಗೌರವಿಸುವ ಉದ್ದೇಶದಿಂದ ವಿಶ್ವ ಆರೋಗ್ಯ ಸಂಸ್ಥೆಯೂ ಈ ವರ್ಚುವಲ್ ಕಾರ್ಯಕ್ರಮ ಆಯೋಜಿಸಿತ್ತು. ವಿಶೇಷ ಎಂದರೆ ಭಾರತದಿಂದ ಆಯ್ಕೆಯಾದ ಏಕೈಕ ನಾಯಕಿ ಇವರಾಗಿದ್ದರು. ಉಳಿದಂತೆ ಕಾರ್ಯಕ್ರಮದಲ್ಲಿ ಕೊರಿಯಾದ ಆಂತರಿಕ ಭದ್ರತೆಯ ಉಪಮಂತ್ರಿ ಡಾ.ಇನ್ ಜಾಯ್ ಲೀ, ನ್ಯೂಯಾರ್ಕ್ನ ಗವರ್ನರ್ ಆಂಡ್ರೂ ಕ್ಯುಮೋ, ಅಂತರಾಷ್ಟ್ರೀಯ ನರ್ಸ್ಗಳ ಮಂಡಳಿಯ ಅಧ್ಯಕ್ಷೆ ಅನ್ನೆಟ್ಟೆ ಕೆನಡಿ, ವಿಶ್ವ ಆರೋಗ್ಯ ಸಂಸ್ಥೆಯ ಆರೋಗ್ಯ ಸಂಪನ್ಮೂಲ ವಿಭಾಗದ ನಿರ್ದೇಶಕ ಜಿಮ್ ಕ್ಯಾಂಪ್ಬೆಲ್ ಮತ್ತು ಅಂತರಾಷ್ಟ್ರೀಯ ಸಾರ್ವಜನಿಕ ಸೇವೆಗಳ ಅಧ್ಯಕ್ಷೆ ರೋಸಾ ಪಾವನೇಲಿ ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಚ್.ಇ.ಇಥಿಯೋಪಿಯಾದ ಅಧ್ಯಕ್ಷ ಎಂ.ಎಸ್.ಸಾಹ್ಲೆ-ವರ್ಕ್ ಜೆವ್ಡೆ, ವಿಶ್ವ ಆರೋಗ್ಯ ಸಂಸ್ಥೆಯ ಮಹಾ ನಿರ್ದೇಶಕ ಡಾ.ಟೆಡ್ರೊಸ್ ಅದಾನಂ ಗೇಬ್ರಿಯೆಸಸ್ ವರ್ಚುವಲ್ ಸಮಾವೇಶದಲ್ಲಿ ಮುಖ್ಯ ಭಾಷಣ ಮಾಡಿದರು.