ಮುಂಬೈ, ಜೂ.24 (DaijiworldNews/MB) : ಗಡಿಯಲ್ಲಿ ಘರ್ಷಣೆ ನಡೆಸಿ ಭಾರತೀಯ ಯೋಧರನ್ನು ಹತ್ಯೆಗೈದ ಚೀನಾ ಈಗ ಭಾರತದ ಮೇಲೆ ಸೈಬರ್ ದಾಳಿಯನ್ನು ಆರಂಭಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಮಹಾರಾಷ್ಟ್ರದ ಹಿರಿಯ ಪೊಲೀಸ್ ಅಧಿಕಾರಿಗಳು, 5 ದಿನಗಳಲ್ಲಿ ಸುಮಾರು 40,000 ಕ್ಕೂ ಅಧಿಕ ಸೈಬರ್ ದಾಳಿಗಳನ್ನು ಚೀನಾದ ಹ್ಯಾಕರ್ಗಳು ನಡೆಸಲು ಪ್ರಯತ್ನಿಸಿದ್ದು ಭಾರತದ ಬ್ಯಾಂಕಿಂಗ್, ಮಾಹಿತಿ ತಂತ್ರಜ್ಞಾನ ಮೂಲಸೌಕರ್ಯ, ಮೊದಲಾದ ಪ್ರಮುಖ ಕ್ಷೇತ್ರಗಳ ಮೇಲೆ ಸೈಬರ್ ದಾಳಿ ನಡೆಸಲು ಯತ್ನಿಸಿದೆ ಎಂದು ಹೇಳಿದ್ದಾರೆ.
ಹಾಗೆಯೇ ಇಂಟರ್ನೆಟ್ನಲ್ಲಿ ಖರೀದಿ ಮಾಡುವ ಗ್ರಾಹಕರು ಎಚ್ಚರದಿಂದ ಇರಬೇಕು. ncov2019@gov.in ಐಡಿಯಲ್ಲಿ ಉಚಿತ ಕೋವಿಡ್-19 ಪರೀಕ್ಷೆ ನಡೆಸುವುದಾಗಿ ಇ- ಮೇಲ್ ಬಂದಲ್ಲಿ ಅದು ಹ್ಯಾಕರ್ಗಳ ಸಂಚು ಎಂಬ ಎಚ್ಚರಿಕೆ ಇರಲಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಈ ಬಗ್ಗೆ ತಿಳಿಸಿರುವ ಸೈಬರ್ ವಿಭಾಗದ ವಿಶೇಷ ಐಜಿ ಯಶಸ್ವಿ ಯಾದವ್ ಅವರು, ಗಡಿಯಲ್ಲಿ ಸಂಘರ್ಷ ಆರಂಭವಾದ ಬಳಿಕ ಚೀನಾ ಆನ್ಲೈನ್ ದಾಳಿಯನ್ನು ಕೂಡಾ ಆರಂಭಿಸಿದೆ ಎಂದು ಹೇಳಿದ್ದಾರೆ.
ಇನ್ನು ದೇಶದಲ್ಲಿ ಸೈಬರ್ ದಾಳಿ ಅಧಿಕವಾಗುವ ಆತಂಕವಿದ್ದು, ತನ್ನ 20 ಲಕ್ಷ ಗ್ರಾಹಕರಿಗೆ ಎಚ್ಚರದಿಂದ ಇರಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ಬಿಐ) ಸೂಚಿಸಿದೆ ಎಂದು ವರದಿ ತಿಳಿಸಿದೆ.