ಬೆಂಗಳೂರು, ಜೂ 24(Daijiworld News/MSP): ಕೊವೀಡ್ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಗಳಲ್ಲಿ ದರ ಪಟ್ಟಿ ನಿಗದಿ ಮಾಡಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು ಸರ್ಕಾರ ಉದ್ದೇಶ ಜನರ ಜೀವ ಉಳಿಸುವುದೋ? ಜೀವ ತೆಗೆಯುವುದೋ ?ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಸರಣಿ ಟ್ವೀಟ್ ಮಾಡಿರುವ ಅವರು, ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸೆಗಾಗಿ ಸರ್ಕಾರ ನಿಗದಿಪಡಿಸಿರುವ ವೆಚ್ಚದ ವಿವರ ಸೋಂಕಿತರಿಗೆ ಹೃದಯಾಘಾತವಾಗುವಂತಿದೆ. ಒಂದು ಜವಾಬ್ದಾರಿಯುತ ಸರ್ಕಾರ ತನ್ನೆಲ್ಲ ಸೂಕ್ಷ್ಮತೆಯನ್ನು ಕಳೆದುಕೊಂಡು ಇಷ್ಟೊಂದು ಅಮಾನವೀಯ, ಇಷ್ಟೊಂದು ಜನವಿರೋಧಿಯಾಗಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.
ರಾಜ್ಯ ಎಲ್ಲಾ ಆಸ್ಪತ್ರೆಗಳಲ್ಲೂ ಸೋಂಕಿತರಿಕೆ ಉಚಿತ ಚಿಕಿತ್ಸೆ ನೀಡಬೇಕೆಂದು ಆಗ್ರಹಿಸಿದ ಅವರು, ಕೊರೊನಾ ಸೋಂಕಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳು ನಿಗದಿಪಡಿಸಿರುವ ಚಿಕಿತ್ಸಾ ಶುಲ್ಕವನ್ನು ಕಣ್ಣುಮುಚ್ಚಿ ಅನುಮೋದಿಸಿ ಜಾರಿಗೆ ತರಲು ಹೊರಟಿರುವ ರಾಜ್ಯ ಸರ್ಕಾರ ಖಾಸಗಿ ಆಸ್ಪತ್ರೆಗಳ ಲಾಬಿಗೆ ಮಣಿದಂತಿದೆ. ರಾಜ್ಯ ಸರ್ಕಾರ ನೆರವಾಗಲು ಹೊರಟಿರುವುದು ಸೋಂಕಿತರಿಗೋ? ಖಾಸಗಿ ಆಸ್ಪತ್ರೆಗಳಿಗೋ ಎಂದು ಕಿಡಿಕಾರಿದ್ದಾರೆ.
ಲಾಕ್ಡೌನ್ನಿಂದಾಗಿ ಜನರ ದುಡಿಮೆಯ ಅವಕಾಶಗಳೆಲ್ಲ ಮುಚ್ಚಿ ಹೋಗಿವೆ. ಅಸಂಖ್ಯಾತ ನೌಕರರನ್ನು ಕಾರ್ಖಾನೆ ಮತ್ತು ಕಂಪೆನಿಗಳು ಕೆಲಸದಿಂದ ತೆಗೆದು ಹಾಕಿವೆ. ಇದರಿಂದಾಗಿ ಜನರ ಬಳಿ ಹಣವಿಲ್ಲ. ಇಂತಹ ಪರಿಸ್ಥಿತಿಯಲ್ಲೂ ರಾಜ್ಯ ಸರ್ಕಾರ ಕೊರೊನಾ ಚಿಕಿತ್ಸೆಗೆ ದರ ನಿಗದಿ ಮಾಡಿರುವುದು ಅಮಾನವೀಯ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.