ಸೂರತ್, ಜೂ24 (DaijiworldNews/MB) : ಗುಜರಾತ್ನ ಸೂರತ್ನಲ್ಲಿನ ಬ್ಯಾಂಕ್ನಲ್ಲಿ ಮಹಿಳಾ ಬ್ಯಾಂಕ್ ಸಿಬ್ಬಂದಿ ಮೇಲೆ ದುಷ್ಕರ್ಮಿಯೋರ್ವ ಹಲ್ಲೆ ಮಾಡಿದ್ದು ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆಗ್ರಹಿಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಸೂರತ್ನ ಕಲೆಕ್ಟರ್ ಡಾ.ಧವಲ್ ಪಟೇಲ್ ಅವರೊಂದಿಗೆ ಬ್ಯಾಂಕಿನಲ್ಲಿ ಮಹಿಳಾ ಸಿಬ್ಬಂದಿಯ ಮೇಲೆ ಹಲ್ಲೆ ನಡೆದ ಘಟನೆಯ ಕುರಿತು ಮಾತನಾಡಿದೆ. ತಡರಾತ್ರಿ ಹೂಡಿದ ಎಫ್ಐಆರ್ ಕುರಿತು ಸಮಯೋಚಿತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಹೇಳಿದ್ದಾರೆ.
ಈ ಕುರಿತು ಮಾಹಿತಿ ಪಡೆಯಲಾಗುತ್ತಿರುತ್ತದೆ. ಬ್ಯಾಂಕುಗಳಲ್ಲಿನ ಎಲ್ಲ ಸಿಬ್ಬಂದಿಗಳ ಸುರಕ್ಷತೆಯು ನಮಗೆ ಮಹತ್ವದ್ದಾಗಿದೆ ಎಂದು ಭರವಸೆ ನೀಡಲು ಬಯಸುತ್ತೇನೆ. ಈ ಸವಾಲುಗಳ ಮಧ್ಯೆ, ಬ್ಯಾಂಕ್ ಕಾರ್ಯನಿರ್ವಹಿಸುತ್ತಿದ್ದು ಅವರ ಸುರಕ್ಷತೆ ಘನತೆಗೆ ಧಕ್ಕೆ ಉಂಟಾಗದಂತೆ ನೋಡಲಾಗುವುದು ಎಂದು ತಿಳಿಸಿದ್ದಾರೆ.
ನನ್ನ ಕಚೇರಿ ಪೊಲೀಸ್ ಆಯುಕ್ತರಾದ ಶ್ರೀ. ಭ್ರಾಮ್ಭಟ್ (ಐಪಿಎಸ್) ಅವರೊಂದಿಗೆ ಮಾತನಾಡಿದೆ. ಅವರು ಸ್ವತಃ ಬ್ಯಾಂಕಿಗೆ ಭೇಟಿ ನೀಡಿ ಸಿಬ್ಬಂದಿಗಳ ಸುರಕ್ಷತೆಯ ಬಗ್ಗೆ ಭರವಸೆ ನೀಡುತ್ತಾರೆ. ಹಾಗೆಯೇ ಆರೋಪಿ ಕಾನ್ಸ್ಟೇಬಲ್ನ್ನು ಶೀಘ್ರವೇ ಅಮಾನತಿಗೊಳಿಸಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಗುಜರಾತ್ನ ಸೂರತ್ನಲ್ಲಿನ ಬ್ಯಾಂಕ್ಗೆ ವ್ಯಕ್ತಿಯೋರ್ವ ನುಗ್ಗಿ ಅಲ್ಲಿದ್ದ ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದು ಇದೀಗ ಈ ದೃಶ್ಯ ವೈರಲ್ ಆಗಿದೆ.
ಕೊರೊನಾ ಸಂದರ್ಭದಲ್ಲಿ ಜನರಿಗಾಗಿ ಸೇವೆ ಸಲ್ಲಿಸುತ್ತಿರುವ ಬ್ಯಾಂಕ್ ಸಿಬ್ಬಂದಿಗಳ ಮೇಲೆ ಹಲ್ಲೆಯನ್ನು ನೆಟ್ಟಿಗರು ತೀವ್ರವಾಗಿ ಖಂಡಿಸಿದ್ದು ಕ್ರಮಕ್ಕೆ ಆಗ್ರಹಿಸಿದ್ದಾರೆ.