ನವದೆಹಲಿ, ಜೂ24 (DaijiworldNews/MB) : ''ವಿಪಕ್ಷವೆಂದರೆ ನಾವೊಬ್ಬರೆ ಎಂಬ ಭ್ರಮೆ ಈ ದೇಶದಲ್ಲಿ ಒಂದು ರಾಜಮನೆತನದ ಪಕ್ಷಕ್ಕಿದೆ'' ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಹೇಳಿದ್ದಾರೆ.
ಟ್ವೀಟ್ ಮೂಲಕ ವಿಪಕ್ಷ ಹಾಗೂ ಆಡಳಿತರೂಢ ಪಕ್ಷಗಳ ನಡುವೆ ವಾಕ್ಸಮರ ನಡೆಯುತ್ತಲ್ಲೇ ಇದ್ದು ಯಾರ ಹೆಸರನ್ನು ಉಲ್ಲೇಖಿಸದೆ ಬುಧವಾರ ಟ್ವೀಟ್ ಮಾಡಿರುವ ನಡ್ಡಾ ಅವರು, ''ಒಂದು ರಾಜಮನೆತನದ ಪಕ್ಷಕ್ಕೆ ಹಾಗೂ ಅದರ ಅನುಯಾಯಿಗಳಿಗೆ ನಾವೊಬ್ಬರೇ ಪ್ರತಿಪಕ್ಷ ಎಂಬ ಭ್ರಾಂತಿ ಇದೆ. ಈ ರಾಜವಂಶವು ತಂತ್ರಗಳನ್ನು ಎಸೆಯುತ್ತದೆ ಮತ್ತು ಇದರ ಅನುಯಾಯಿಗಳು ನಕಲಿ ಸುದ್ದಿ ಹೆಣೆಯುತ್ತಾರೆ. ಇತ್ತೀಚಿನದು ಸರ್ಕಾರಕ್ಕೆ ಪ್ರಶ್ನೆಗಳನ್ನು ಕೇಳುವ ಪ್ರತಿಪಕ್ಷಗಳಿಗೆ ಸಂಬಂಧಿಸಿದೆ'' ಎಂದು ಟೀಕೆ ಮಾಡಿದ್ದಾರೆ.
''ಪ್ರಶ್ನೆಗಳನ್ನು ಕೇಳುವುದು ಪ್ರತಿಪಕ್ಷಗಳ ಹಕ್ಕು. ಎಲ್ಲಾ ಪಕ್ಷದ ಸದಸ್ಯರ ಸಭೆಯಲ್ಲಿ ಆರೋಗ್ಯಕರ ಚರ್ಚೆಗಳು ನಡೆಯಿತು. ಹಲವಾರು ವಿರೋಧ ಪಕ್ಷದ ನಾಯಕರು ತಮ್ಮ ಅಮೂಲ್ಯವಾದ ಸಲಹೆಯನ್ನು ನೀಡಿದರು. ಮುಂದಿನ ಮಾರ್ಗವನ್ನು ನಿರ್ಧರಿಸುವಲ್ಲಿ ಅವರು ಕೇಂದ್ರವನ್ನು ಸಂಪೂರ್ಣವಾಗಿ ಬೆಂಬಲಿಸಿದರು. ಆದರೆ ಒಂದು ಕುಟುಂಬ ಇದಕ್ಕೆ ಹೊರತಾಗಿದೆ. ಯಾರು ಎಂದು ಊಹಿಸಬಹುದೇ'' ಎಂದು ಪ್ರಶ್ನಿಸಿದ್ದಾರೆ.
''ತಿರಸ್ಕರಿಸಿದ ಮತ್ತು ಹೊರಹಾಕಲ್ಪಟ್ಟ ರಾಜವಂಶವು ಇಡೀ ಪ್ರತಿಪಕ್ಷಕ್ಕೆ ಸಮನಾಗಿಲ್ಲ. ಒಂದು ರಾಜವಂಶದ ಹಿತಾಸಕ್ತಿಗಳು ಭಾರತದ ಹಿತಾಸಕ್ತಿಗಳಲ್ಲ. ಇಂದು, ರಾಷ್ಟ್ರವು ಒಗ್ಗೂಡಿ ನಮ್ಮ ಸಶಸ್ತ್ರ ಪಡೆಗಳನ್ನು ಬೆಂಬಲಿಸುತ್ತಿದ್ದೇವೆ. ಇದು ಏಕತೆ ಮತ್ತು ಒಗ್ಗಟ್ಟಿನ ಸಮಯ. ವಂಶ ಬೆಳೆಸುವ ಯೋಚನೆಗೆ ಸ್ವಲ್ಪ ಕಾಯಬೇಕು'' ಎಂದು ವಾಗ್ದಾಳಿ ನಡೆಸಿದ್ದಾರೆ.
''ಒಂದು ರಾಜವಂಶದ ದುಷ್ಕೃತ್ಯಗಳಿಂದಾಗಿ ನಮ್ಮ ಭೂಮಿಯಲ್ಲಿ ಸಾವಿರಾರು ಚದರ ಕಿಲೋಮೀಟರ್ ಜಾಗವನ್ನು ಕಳೆದುಕೊಂಡಿದ್ದೇವೆ. ಸಿಯಾಚಿನ್ ಹಿಮನದಿ ಬಹುತೇಕ ಭಾಗ ಕಳೆದುಕೊಂಡಿದ್ದೇವೆ. ಇನ್ನು ಹಲವು ನಡೆದಿದೆ. ಹೀಗಿರುವಾಗ ಭಾರತ ಅವರನ್ನು ತಿರಸ್ಕರಿಸಿದ್ದರಲ್ಲಿ ಆಶ್ಚರ್ಯವಿಲ್ಲ'' ಎಂದು ಹೇಳಿದ್ದಾರೆ.