ನವದೆಹಲಿ, ಜೂ. 25 (DaijiworldNews/MB) : ಈ ದಿನ, 45 ವರ್ಷಗಳ ಹಿಂದೆ ಒಂದು ಕುಟುಂಬದ ಅಧಿಕಾರಕ್ಕಾಗಿ ದುರಾಸೆ ತುರ್ತು ಪರಿಸ್ಥಿತಿಯನ್ನು ಹೇರಲಾಗಿತ್ತು ಎಂದು ಗೃಹ ಸಚಿವ ಅಮಿತಾ ಶಾ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಈ ದಿನ, 45 ವರ್ಷಗಳ ಹಿಂದೆ ಒಂದು ಕುಟುಂಬದ ಅಧಿಕಾರಕ್ಕಾಗಿ ದುರಾಸೆ ತುರ್ತು ಪರಿಸ್ಥಿತಿಯನ್ನು ಹೇರಲಾಗಿತ್ತು. ರಾತ್ರೋರಾತ್ರಿ ರಾಷ್ಟ್ರವನ್ನು ಸೆರೆಮನೆಯನ್ನಾಗಿ ಮಾಡಲಾಗಿತ್ತು. ಪತ್ರಿಕಾ, ನ್ಯಾಯಾಲಯಗಳು, ವಾಕ್ಚಾತುರ್ಯ ಎಲ್ಲವೂ ಮುರಿಯಲಾಯಿತು. ಬಡವರು ಮತ್ತು ದೀನ ದಲಿತರ ಮೇಲೆ ದೌರ್ಜನ್ಯ ನಡೆದಿತ್ತು ಎಂದು ಹೇಳಿದ್ದಾರೆ.
ಲಕ್ಷಾಂತರ ಜನರ ಪ್ರಯತ್ನದಿಂದಾಗಿ, ತುರ್ತು ಪರಿಸ್ಥಿತಿಯನ್ನು ತೆಗೆದುಹಾಕಲಾಯಿತು. ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಪುನಃ ಸ್ಥಾಪಿಸಲಾಯಿತು ಆದರೆ ಕಾಂಗ್ರೆಸ್ನಲ್ಲಿ ಪ್ರಜಾಪ್ರಭುತ್ವ ಇಲ್ಲ. ಪಕ್ಷದ ಹಿತಾಸಕ್ತಿಗಳು ಮತ್ತು ರಾಷ್ಟ್ರೀಯ ಹಿತಾಸಕ್ತಿಗಳಿಗಿಂತ ಒಂದು ಕುಟುಂಬದ ಹಿತಾಸಕ್ತಿಗಳು ಮೇಲುಗೈ ಸಾಧಿಸಿದ್ದವು. ಇಂದಿನ ಕಾಂಗ್ರೆಸ್ನಲ್ಲಿಯೂ ಈ ವಿಷಾದಕರ ಸ್ಥಿತಿ ಇನ್ನು ಕೂಡಾ ಇದೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ಹಾಗೆಯೇ ಕಾಂಗ್ರೆಸ್ನಲ್ಲಿ ನಾಯಕರಿಗೆ ಉಸಿರುಗಟ್ಟುತ್ತಿದೆ ಅದು ದುಃಖಕರ ಸಂಗತಿ ಎಂದು ಹೇಳಿದ್ದಾರೆ.
ಇನ್ನು ಭಾರತದ ವಿರೋಧ ಪಕ್ಷಗಳಲ್ಲಿ ಒಂದಾದ ಕಾಂಗ್ರೆಸ್ ತನ್ನನ್ನು ತಾನೇ ಕೇಳಿಕೊಳ್ಳಬೇಕು ಎಂದು ಮೂರು ಪ್ರಶ್ನೆಗಳನ್ನು ಕೇಳಿರುವ ಅವರು, ತುರ್ತು ಪರಿಸ್ಥಿತಿಯ ಮನಸ್ಥಿತಿ ಯಾಕೆ ಉಳಿದಿದೆ? ಒಂದು ರಾಜವಂಶಕ್ಕೆ ಸೇರದ ನಾಯಕರು ಏಕೆ ಮಾತನಾಡಲು ಸಾಧ್ಯವಾಗುತ್ತಿಲ್ಲ? ಕಾಂಗ್ರೆಸ್ನಲ್ಲಿ ನಾಯಕರು ಯಾಕೆ ನಿರಾಶರಾಗುತ್ತಿದ್ದಾರೆ? ಎಂದು ಪ್ರಶ್ನಿಸಿದ್ದು ಇದನ್ನು ಕಾಂಗ್ರೆಸ್ ವಿಮರ್ಶಿಸದಿದ್ದಲ್ಲಿ ಜನರೊಂದಿಗೆ ಅವರಿಗಿರುವ ಸಂಪರ್ಕ ಇನ್ನಷ್ಟು ಕಡಿತವಾಗುತ್ತದೆ ಎಂದು ಹೇಳಿದ್ದಾರೆ.