ಬೆಂಗಳೂರು, ಜೂ. 25 (DaijiworldNews/MB) : ಪೆಟ್ರೋಲ್, ಡೀಸೆಲ್ ದರ ಏರಿಕೆ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ಜೂನ್ 29ರಂದು ಧರಣಿ ನಡೆಸಲಾಗುತ್ತದೆ ಎಂದು ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಲಾಕ್ಡೌನ್ ಹಿನ್ನಲೆ ಜನರು ಸಂಕಷ್ಟದಲ್ಲಿದ್ದು ಕೇಂದ್ರ ಸರ್ಕಾರವು ಲಾಕ್ಡೌನ್ ಬಳಿಕ ಅಬಕಾರಿ ಸುಂಕವನ್ನು ಏರಿಸಿದೆ. ಡೀಸೆಲ್ ಮೇಲೆ ಶೇ 26.48, ಪೆಟ್ರೋಲ್ ಮೇಲೆ ಶೇ 21ರಷ್ಟು ತೆರಿಗೆ ಹಾಕಿ ಕೇಂದ್ರ ಸರ್ಕಾರ ದೇಶದ ಜನರನ್ನು ಸುಲಿಗೆ ಮಾಡುತ್ತಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿದರೂ ಕೂಡಾ ಕೇಂದ್ರ ಸರ್ಕಾರ ಇಂಧನ ಬೆಲೆ ಏರಿಸುತ್ತಿದೆ. ಈ ನಿಟ್ಟಿನಲ್ಲಿ ಹಿರಿಯ ನಾಯಕರ ಸಭೆ ಕರೆದು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಕುರಿತು ಚರ್ಚಿಸಿ ಹೋರಾಟದ ರೂಪುರೇಷೆ ಸಿದ್ಧಪಡಿಸಿ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಪ್ರತಿಭಟನೆ ನಡೆಸುತ್ತೇವೆ. ಜುಲೈ 4, 5ರಂದು ತಾಲ್ಲೂಕು ಮಟ್ಟದಲ್ಲಿ ಧರಣಿ ನಡೆಸಲಾಗುವುದು ಎಂದು ಹೇಳಿದ್ದಾರೆ.
ಹಾಗೆಯೇ ರಾಹುಲ್ ಗಾಂಧಿ ಸೂಚನೆಯಂತೆ ಗಾಂಧಿ ಪ್ರತಿಮೆ ಬಳಿ ಹುತಾತ್ಮ ಯೋಧರಿಗೆ ಶುಕ್ರವಾರ ನಮನ ಸಲ್ಲಿಸಲಾಗುತ್ತದೆ.
ಇನ್ನು ಕನಕಪುರದ ಲಾಕ್ಡೌನ್ ಕುರಿತಾಗಿ ಮಾತನಾಡಿದ ಅವರು, ನಾನು ಕನಕಪುರ ನಾಗರಿಕನಾಗಿ ಅಲ್ಲಿ ಲಾಕ್ಡೌನ್ ಮಾಡಿದ್ದೇನೆ. ಬೆಂಗಳೂರಿನ ಜನರು ಬೇಕಾಗಿರುವುದನ್ನು ಮಾಡುತ್ತಾರೆ. ನಾನು ಲಾಕ್ಡೌನ್ ಮಾಡಿದೆ ಕಾರಣಕ್ಕೆ ಡಿಸಿಎಂ ಸಾಹೇಬರು ಏನೆಲ್ಲಾ ಹೇಳಿದರು. ಪಾಪ, ಅವರ ಬಗ್ಗೆ ನಾನ್ಯಾಕೆ ಮಾತನಾಡಲಿ ಎಂದು ಡಿಸಿಎಂ ಅಶ್ವತ್ಥ ನಾರಾಯಣ್ ವಿರುದ್ಧ ಕಿಡಿಕಾರಿದರು.