ನವದೆಹಲಿ, ಜೂ 25(DaijiworldNews/PY) : ಶೈಕ್ಷಣಿಕ ವರ್ಷ ಇನ್ನಷ್ಟು ವಿಳಂಬವಾಗಬಾರದು ಎನ್ನುವ ನಿಟ್ಟಿನಲ್ಲಿ ಮುಂದಿನ ಸೆಮಿಸ್ಟರ್ ಅನ್ನು ಪೂರ್ತಿ ಆನ್ಲೈನ್ ಮೂಲಕವೇ ಬೋಧಿಸಲು ಭಾರತೀಯ ತಂತ್ರಜ್ಞಾನ ಸಂಸ್ಥೆ ಬಾಂಬೆ ಗುರುವಾರ ತೀರ್ಮಾನ ಕೈಗೊಂಡಿದೆ.
ಈ ವಿಚಾರವಾಗಿ ಸಂಸ್ಥೆಯ ನಿರ್ದೇಶಕ ಸುಭಾಷಿಸ್ ಚೌಧರಿ ಮಾತನಾಡಿದ್ದು, ಸೆನೆಟ್ನಲ್ಲಿ ಚರ್ಚೆಯಾದ ನಂತರ ಆನ್ಲೈನ್ ತರಗತಿಗಳನ್ನು ಮಾಡಲು ತೀರ್ಮಾನ ಮಾಡಲಾಗಿದೆ. ಕೊರೊನಾ ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆ ಈ ನಿರ್ಣಯ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಹೆಚ್ಚಾಗಿ ಆನ್ಲೈನ್ ತರಗತಿಗಳನ್ನು ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಈ ಸಂಸ್ಥೆಗೆ ಸಂಬಂಧಪಟ್ಟಂತೆ ಹಲವಾರು ವಿದ್ಯಾರ್ಥಿಗಳು ಆರ್ಥಿಕವಾಗಿ ಹಿಂದುಳಿದ ಕುಟುಂಬದವರಾಗಿದ್ದು, ಈ ಹಿನ್ನಲೆ ವಿದ್ಯಾರ್ಥಿಗಳಿಗೆ ಸಾರ್ವಜನಿಕರು ದೇಣಿಗೆ ನೀಡಿ ನೆರವಾಗಬೇಕು. ಸಾರ್ವಜನಿಕರು ನೀಡಿದ ದೇಣಿಗೆಯಿಂದ ಆನ್ಲೈನ್ ತರಗತಿಗಳಿಗೆ ಅಗತ್ಯವಾದಂತ ಲ್ಯಾಪ್ಟಾಪ್ ಹಾಗೂ ಇತರ ಸಾಧನಗಳನ್ನು ಖರೀದಿ ಮಾಡಬಹುದು ಎಂದು ಹೇಳಿದ್ದಾರೆ.
ಪ್ರಸ್ತುತ ಶೈಕ್ಷಣಿಕ ಚಟುವಟಿಕೆಗಳು ವಿಳಂಬವಾಗುತ್ತಿರುವ ಕಾರಣ ಇದರ ಬಗ್ಗೆ ಪರ್ಯಾಯ ಯೋಚನೆ ಮಾಡಬೇಕಿದೆ. ಆನ್ಲೈನ್ ತರಗತಿಗಳನ್ನು ನಡೆಸಲು ನಿರ್ಧಾರ ತೆಗೆದುಕೊಂಡಿರುವ ಕಾರಣ ಕಂಪ್ಯೂಟರ್ ಹಾಗೂ ಇಂಟರ್ನೆಟ್ ಸೌಲಭ್ಯ ಇಲ್ಲದ ವಿದ್ಯಾರ್ಥಿಗಳಿಗೆ ಹೇಗೆ ನೆರವು ಆಗಬಹುದು ಎನ್ನುವುದನ್ನು ಮೊದಲು ಯೋಚಿಸಬೇಕಾಗಿದೆ ಎಂದು ದೆಹಲಿಯ ಐಐಟಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.