ಬೆಂಗಳೂರು, ಜೂ 25(DaijiworldNews/PY) : ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿವೆ. ಹಾಗಾಗಿ, ಮತ್ತೊಮ್ಮೆ ಲಾಕ್ಡೌನ್ ಜಾರಿ ಮಾಡಬಾರದು ಎಂದರೆ, ಸಾಮಾಜಿಕ ಅಂತರ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವಂತೆ ನಾಗರಿಕರು ಸಹಕರಿಸುವಂತೆ ಮುಂಖ್ಯಮಂತ್ರಿ ಬಿಎಸ್ವೈ ಅವರು ಕೇಳಿಕೊಂಡಿದ್ದಾರೆ.
ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಅವರು ಬುಧವಾರ ಲಾಕ್ಡೌನ್ ಆಗುವ ಸಾಧ್ಯತೆ ಇದೆ ಎನ್ನುವ ಬಗ್ಗೆ ಸುಳಿವು ನೀಡಿದ ಹಿನ್ನೆಲೆ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಿಎಸ್ವೈ ಅವರು, ನಗರದಲ್ಲಿ ಪರಿಸ್ಥಿತಿ ಹದಗೆಟ್ಟಿರುವ ಕಾರಣ ಅಧಿಕಾರಿಗಳೊಂದಿಗೆ ಸಹಕರಿಸುವಂತೆ ಜನರಿಗೆ ಮನವಿ ಮಾಡಿದ್ದು, ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಈ ಬಗ್ಗೆ ಎಲ್ಲಾ ರಾಜಕೀಯ ಪಕ್ಷಗಳ ಸಚಿವರು, ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳೊಂದಿಗೆ ಚರ್ಚೆ ಮುಂದುವರಿಸುವುದಾಗಿ ತಿಳಿಸಿದರು.
ರಾಜ್ಯದಲ್ಲಿ ಈಗಾಗಲೇ ಒಟ್ಟು 1,685 ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 418 ಮಂದಿ ಗುಣಮುಖರಾಗಿದ್ದು, 75 ಮಂದಿ ಮೃತಪಟ್ಟಿದ್ದಾರೆ. ಪ್ರಸ್ತುತ ನಗರದಾದ್ಯಂತ 500ಕ್ಕೂ ಅಧಿಕ ಕಂಟೈನ್ಮೆಂಟ್ ವಲಯಗಳಿದ್ದು, ಕಳೆದ 24 ಗಂಟೆಯಲ್ಲಿ 170ಕ್ಕೂ ಅಧಿಕ ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ ಎಂದು ಸಿಎಂ ಬಿಎಸ್ವೈ ಹೇಳಿದರು.
ಕೊರೊನಾ ಸೋಂಕು ವ್ಯಾಪಕವಾಗಿ ಹಬ್ಬುತ್ತಿದ್ದು, ಇದನ್ನು ನಿಯಂತ್ರಿಸುವಲ್ಲಿ ನಾವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಅಲ್ಲದೇ, ಕೆಲವು ಪ್ರದೇಶಗಳನ್ನು ಸೀಲ್ಡೌನ್ ಮಾಡಿದ್ದೇವೆ. ಮಂತ್ರಿಗಳ ಹಾಗೂ ಅಧಿಕಾರಿಗಳ ಸಭೆ ಕರೆದಿದ್ದು, ಇದನ್ನು ನಿಯಂತ್ರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 10,000 ದಾಟಿದ್ದು, ಈ ಪೈಕಿ ಒಟ್ಟು 164 ಮಂದಿ ಸಾವನ್ನಪ್ಪಿದ್ದಾರೆ. 6,151 ಮಂದಿ ಗುಣಮುಖರಾಗಿದ್ದಾರೆ. ಮೇ 31ರಂದು ಲಾಕ್ಡೌನ್ -4ರ ಸಂದರ್ಭ ಕರ್ನಾಟಕದಲ್ಲಿ 3,200 ಕೊರೊನಾ ಪ್ರಕರಣಗಳೂ ವರದಿಯಾಗಿತ್ತು. ಇದರಲ್ಲಿ ಬೆಂಗಳೂರಿನಲ್ಲಿ 350ಕ್ಕೂ ಅಧಿಕ ಕೊರೊನಾ ಪ್ರಕರಣಗಳು ದಾಖಲಾಗಿವೆ. ಜೂನ್ 24ರಂದು ಅನ್ಲಾಕ್ -1ರ ವೇಳೆ ಕರ್ನಾಟಕದಲ್ಲಿ ಕೊರೊನಾ ಪ್ರಕರಣವು 10,000 ದಾಟಿದ್ದು, ಬೆಂಗಳೂರಿನಲ್ಲಿ ಅಧಿಕೃತ ಅಂಕಿ-ಅಂಶಗಳ ಪ್ರಕಾರ ಒಟ್ಟು 1,600 ಪ್ರಕರಣಗಳು ವರದಿಯಾಗಿವೆ.
ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ನಿಯಂತ್ರಿಸುವ ಕ್ರಮಗಳ ಬಗ್ಗೆ ಚರ್ಚೆ ಮಾಡಲು ಸಿಎಂ ಬಿಎಸ್ವೈ ಅವರು ಸೋಮವಾರ ತುರ್ತು ಸಭೆ ಕರೆದಿದ್ದು, ಅಧಿಕ ಸೋಂಕು ಪತ್ತೆಯಾಗಿರುವ ಕ್ಲಸ್ಟರ್ಗಳಲ್ಲಿ ಲಾಕ್ಡೌನ್ನ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು. ಅದೇ ರೀತಿ ಬೆಂಗಳೂರಿನಾದ್ಯಂತ ಕ್ಲಸ್ಟರ್ಗಳಲ್ಲಿ ಕಟ್ಟುನಿಟ್ಟಾದ ಲಾಕ್ಡೌನ್ ಕ್ರಮಗಳನ್ನು ಜಾರಿಗೆ ತರಲಾಗಿದ್ದರೂ, ಹೆಚ್ಚು ಸಂಖ್ಯೆಯಲ್ಲಿ ಕೊರೊನಾ ಪ್ರಕರಣಗಳು ವರದಿಯಾಗಿವೆ.
ಕೊರೊನಾ ವೈರಸ್ ವ್ಯಾಪಿಸುವುದನ್ನು ಪರಿಶೀಲಿಸುವ ಸಲುವಾಗಿ ನಗರದ ಕೆ.ಆರ್.ಮಾರ್ಕೆಟ್ ಹಾಗೂ ಕಲಾಸಿಪಾಳ್ಯ ಮಾರುಕಟ್ಟೆಯನ್ನು ಬಿಬಿಎಂಪಿ 15 ದಿನಗಳವರೆಗೆ ಸೀಲ್ಡೌನ್ ಮಾಡಿದೆ.
ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಸುರಕ್ಷಿತವಾಗಿ ನಡೆಸಲು ರಾಜ್ಯ ಸರ್ಕಾರ ಎಲ್ಲಾ ಕ್ರಮಗಳನ್ನು ತೆಗೆದುಕೊಂಡಿದೆ. ವಿದ್ಯಾರ್ಥಿಗಳು ತಮ್ಮು ಉಜ್ವಲ ಭವಿಷ್ಯಕ್ಕಾಗಿ ಪರೀಕ್ಷೆ ಬರೆಯಬೇಕಾಗಿದೆ ಎಂದರು.
ಸಭೆಯಲ್ಲಿ ಉಪಮುಖ್ಯಮಂತ್ರಿಗಳಾದ ಡಾ ಸಿ.ಎನ್.ಅಶ್ವಥಾ ನಾರಾಯಣ್, ಗೋವಿಂದ ಕಾರಜೋಳ, ಕಂದಾಯ ಸಚಿವ ಆರ್.ಅಶೋಕ್, ವಿ.ಸೋಮಣ್ಣ, ಆರೋಗ್ಯ ಸಚಿವ ಬಿ.ಶ್ರೀರಾಮುಲು, ಭೈರತಿ ಬಸವರಾಜ್, ಮುಖ್ಯಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್ ಹಾಗೂ ಇತರ ಅಧಿಕಾರಿಗಳು ಭಾಗವಹಿಸಿದ್ದರು.