ನವದೆಹಲಿ, ಜೂ. 26 (DaijiworldNews/MB) : ''ಗಣೇಶನ ವಿಗ್ರಹವೂ ಚೀನಾದಿಂದ ಆಮದು ಯಾಕೆ?'' ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಶ್ನಿಸಿದ್ದಾರೆ.
ತಮಿಳುನಾಡು ವಿಭಾಗದ ಬಿಜೆಪಿ ಕಾರ್ಯಕರ್ತರೊಂದಿಗೆ ಆತ್ಮ ನಿರ್ಭರ ಭಾರತ ಅಭಿಯಾನದ ಬಗೆ ಮಾತನಾಡಿದ ಅವರು, ''ಗಣೇಶ ಚತುರ್ಥಿಯಂದು ವಿಗ್ರಹವನ್ನು ಕೂಡಾ ಚೀನಾದಿಂದ ಖರೀದಿಸಲಾಗುತ್ತಿದೆ. ಯಾಕೆ ನಮ್ಮಿಂದ ಗಣೇಶನ ವಿಗ್ರಹ ಮಾಡಲು ಸಾಧ್ಯವಿಲ್ಲವೇ? ಇಂತಹ ಸ್ಥಿತಿ ಯಾಕೆ ನಿರ್ಮಾಣವಾಗಿದೆ?'' ಎಂದು ಆಶ್ಚರ್ಯ ಸೂಚಿಸಿದ್ದಾರೆ.
''ಬೆಳವಣಿಗೆಯ ದೃಷ್ಟಿಯಿಂದ ದೇಶದಲ್ಲಿ ಹೆಚ್ಚಾಗಿ ಲಭ್ಯವಿಲ್ಲದ ಕಚ್ಚಾವಸ್ತುಗಳನ್ನು ಆಮದು ಮಾಡಿಕೊಳ್ಳುವುದು ಪರವಾಗಿಲ್ಲ. ಆದರೆ ಈ ರೀತಿ ಗಣೇಶನ ವಿಗ್ರಹವೂ ಕೂಡಾ ಯಾಕೆ ಚೀನಾದಿಂದ ಆಮದು ಮಾಡಬೇಕು? ಸ್ಥಳೀಯ ಉದ್ಯೋಗಕ್ಕೆ ಧಕ್ಕೆ ಉಂಟು ಮಾಡುವ ಆಮದು ದೇಶಕ್ಕೆ ಯಾವುದೇ ರೀತಿಯಲ್ಲಿ ಸಹಕಾರಿಯಲ್ಲ'' ಎಂದು ತಿಳಿಸಿದ್ದಾರೆ.
''ಆತ್ಮನಿರ್ಭರ ಅಭಿಯಾನದ ಆಶಯ ಆಮದನ್ನು ಕಡಿತಗೊಳಿಸಿ ಸ್ವಾವಲಂಬನೆಯನ್ನು ಸಾಧಿಸುವುದಾಗಿದ್ದು ದಿನ ನಿತ್ಯ ಉಪಯೋಗದ ಪೂಜಾ ಸಾಮಗ್ರಿಗಳು, ಸೋಪ್ ಬಾಕ್ಸ್, ಪ್ಲಾಸ್ಟಿಕ್ ಉಪಕರಣಗಳು ಸ್ಥಳೀಯ ಸಂಸ್ಥೆಗಳೇ ಉತ್ಪಾದಿಸಿದ್ದಲ್ಲಿ ಸಣ್ಣ ಹಾಗೂ ಮಧ್ಯಮ, ಅತಿ ಸಣ್ಣ ಉದ್ಯಮಗಳಿಗೆ ಸ್ವಾವಲಂಬನೆಯ ಉದ್ಯೋಗ ಮಾಡಲು ಸಹಾಯವಾಗುತ್ತದೆ'' ಎಂದು ಹೇಳಿದ್ದಾರೆ.
ಹಾಗೆಯೇ ಈ ಸಂದರ್ಭದಲ್ಲಿ ಲಡಾಖ್ನಲ್ಲಿ ಹುತಾತ್ಮರಾದ ತಮಿಳುನಾಡಿನ ಯೋಧ, ಹವಾಲ್ದಾರ್ ಕೆ ಪಳನಿಗೆ ಗೌರವ ಅರ್ಪಿಸಿದ್ದಾರೆ.