ಬೆಂಗಳೂರು, ಜೂ 26 (Daijiworld News/MSP): ಮಹಾಮಾರಿ ಕೊರೊನಾಗೆ ಹೆದರಿ ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಸೋಂಕಿತ 60 ವರ್ಷದ ವೃದ್ದೆಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸೋಂಕಿತ ವೃದ್ದೆ ಕೆ.ಸಿ.ಜನರಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.
ಕುಣಿಗಲ್ ಮೂಲದ ವೃದ್ದೆ ರಾಜಗೋಪಾಲನಗರದಲ್ಲಿ ವಾಸವಾಗಿದ್ದರು. ಜೂನ್ 18ರಂದು ಕೊರೊನಾ ಸೋಂಕು ದೃಢಪಟ್ಟಿತ್ತು. ಹೀಗಾಗಿ ಕೆ.ಸಿ ಜನರಲ್ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ ರಾತ್ರಿ 2.30 ರ ಸುಮಾರಿಗೆ ಮಹಿಳೆ ಕೆ.ಸಿ ಜನರಲ್ ಆಸ್ಪತ್ರೆಯ ಕೋವಿಡ್ ವಾರ್ಡ್ ನಲ್ಲಿ ತನ್ನ ಸೀರೆಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಈ ಕೊರೋನಾ ಸೋಂಕಿತ ಮಹಿಳೆಯ ಮಗ, ಸೊಸೆ ಹಾಗೂ ಮೊಮ್ಮಗ ಕೂಡ ಸೋಂಕು ಹಿನ್ನಲೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಖಿನ್ನತೆಯಿಂದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಲಾಗಿದೆ. ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.