ಬೆಂಗಳೂರು, ಜೂ 26(DaijiworldNews/PY) : ಸರ್ಕಾರವು ಕೊರೊನಾ ನಿರ್ವಹಣೆ ಮಾಡುವುದರಲ್ಲಿ ಸಂಪೂರ್ಣ ವಿಫಲವಾಗಿದೆ. ಕೊರೊನಾ ವಿಚಾರದಲ್ಲಿ ತಾರತಮ್ಯ ಮಾಡದೇ ಎಲ್ಲರಿಗೂ ಸಮಾನವಾದ ಚಿಕಿತ್ಸೆ ನೀಡಬೇಕು ಎಂದು ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್ಡೌನ್ನಿಂದ ಸಂಕಷ್ಟಕ್ಕೀಡಾದವರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಇದರೊಂದಿಗೆ ಪೆಟ್ರೋಲ್ ಡೀಸೆಲ್ ದರ ಏರಿಕೆಯಾಗಿದ್ದು, ಹೆಚ್ಚು ಹೊರೆ ಬಿದ್ದಿದ್ದು, ಹೋರಾಟ ಮಾಡುವಂತ ಪರಿಸ್ಥಿತಿ ಮುಂದಾಗಿದೆ. ಹಾಗಾಗಿ, ಜೂನ್ 29ರಂದು ಜನರ ರಕ್ಷಣೆಗೆ ಆಗ್ರಹಿಸಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತೇವೆ. ಪ್ರತಿಭಟನೆಯ ಸಂದರ್ಭ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತೇವೆ. ಇದರೊಂದಿಗೆ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇದೇ ವಿಚಾರಗಳನ್ನು ಇಟ್ಟುಕೊಂಡು ಪ್ರತಿಭಟನೆ ಮಾಡುತ್ತೇವೆಎಂದು ತಿಳಿಸಿದರು.
ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾದ ನಿಗದಿ ಮಾಡಲಾಗಿದೆ. ಆದರೆ, ಚಿಕಿತ್ಸೆಗಾಗಿ ಆರ್ಥಿಕ ಸಂಕಷ್ಟಕ್ಕೆ ಒಳಗಾದವರು ಹೇಗೆ ಹಣ ಹೊಂದಿಸುತ್ತಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಉಚಿತ ಚಿಕಿತ್ಸೆಯನ್ನು ಸರ್ಕಾರ ಮಾಡಬೇಕಿತ್ತು. ಆದರೆ ಇದರ ಬದಲಾಗಿ ಸರ್ಕಾರ ರೋಗಿಗಳ ಪ್ರಾಣದೊಂದಿಗೆ ಚೆಲ್ಲಾಟವಾಡುತ್ತಿದೆ. ಸರ್ಕಾರವು ಎಲ್ಲರನ್ನು ಸಮಾನ ದೃಷ್ಠಿಯಿಂದ ಕಾಣಬೇಕು. ಬದಲಾಗಿ ಕುಮಾರಕೃಪಾ ಅತಿಥಿಗೃಹದಲ್ಲಿ ಜನಪ್ರತಿನಿಧಿಗಳು ಸೇರಿದಂತೆ ಹಿರಿಯ ಅಧಿಕಾರಿಗಳಿಗೆ ವಿಶೇಷ ಚಿಕಿತ್ಸೆ ನೀಡುವುದು ಸರಿಯಿಲ್ಲ. ಎಂದರು.
ಇನ್ನು ಸಂಕಷ್ಟಕ್ಕೆ ಒಳಗಾದ ಆಟೊ, ಟ್ಯಾಕ್ಸಿ ಚಾಲಕರಿಗೆ ನೆರವಾಗುವು ನಿಟ್ಟಿನಲ್ಲಿ ಬ್ಲಾಕ್ ಮಟ್ಟದಿಂದ ರಾಜ್ಯಮಟ್ಟದವರಗೂ ಪಕ್ಷದಿಂದ ವಿಶೇಷ ಘಟಕವೊಂದನ್ನು ಪ್ರಾರಂಭ ಮಾಡಲು ನಿರ್ಧರಿಸಿದ್ದು, ಈ ಘಟಕವನ್ನು ವೃತ್ತಿಪರ ಚಾಲಕರ ನೇತೃತ್ವದಲ್ಲಿ ಸ್ಥಾಪನೆ ಮಾಡಲಾಗುವುದು ಎಂದು ತಿಳಿಸಿದರು.