ಬೆಂಗಳೂರು, ಜೂ 26 (Daijiworld News/MSP): ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ಅಭಿವೃದ್ಧಿ ಮತ್ತು ಸಮಸ್ಯೆಗಳಿಗೆ ಸಂಬಂಧಿಸಿದಂತೆ ಅನೇಕ ಪ್ರಮುಖ ವಿಷಯಗಳ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳಲಾಗಿದ್ದು, ಅದರಲ್ಲಿ ಪ್ರಮುಖವಾಗಿ ಹೊಸ ಕೈಗಾರಿಕೆಗಳ ಆರಂಭಕ್ಕೆ ಸಹಾಯಕವಾಗುವಂತ ಕರ್ನಾಟಕ ಕೈಗಾರಿಕ ಸೌಲಭ್ಯ ಅಧಿನಿಯಮಕ್ಕೆ ತಿದ್ದುಪಡಿ ವಿದೇಯಕ್ಕೆ ಅನುಮೋದನೆ, ಅರ್ಧದಲ್ಲಿ ಬಾಕಿ ಉಳಿದ 9.74 ಲಕ್ಷ ಆಶ್ರಯ ಮನೆಗಳ ನಿರ್ಮಾಣಕ್ಕಾಗಿ 10,194 ಕೋಟಿ ರೂ. ಅನುದಾನ ಬಿಡುಗಡೆ ಸೇರಿದಂತೆ ಅನೇಕ ತೀರ್ಮಾನಗಳನ್ನು ಕೈಗೊಳ್ಳಲಾಯಿತು ಎಂದು ಕಾನೂನು, ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ತಿಳಿಸಿದ್ದಾರೆ.
ರಾಜ್ಯದಲ್ಲಿ ಬಾಕಿ ಉಳಿದಿರುವ ವಸತಿ ಯೋಜನೆಗಳನ್ನು ಪೂರ್ಣಗೊಳಿಸಲು 10,194 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯಲಾಗಿದೆ. ಹಲವಾರು ವರ್ಷಗಳಿಂದ ವಸತಿ ಯೋಜನೆಗಳಲ್ಲಿ ಅನುದಾನದ ಏರುಪೇರಾಗಿದೆ. 18 ಲಕ್ಷ ಮನೆಗಳು ನಿರ್ಮಾಣವಾಗಬೇಕಾಗಿತ್ತು. ಆದರೆ 9.74 ಲಕ್ಷ ಮನೆಗಳು ಇನ್ನೂ ನಿರ್ಮಾಣವಾಗದೆ ಬಾಕಿ ಉಳಿದಿವೆ. ಅವುಗಳನ್ನು ಪೂರ್ಣಗೊಳಿಸಲು 10.194 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲು ಸಂಪುಟ ಸಭೆ ಅನುಮತಿ ನೀಡಿದೆ.
ಅಂಬೇಡ್ಕರ್ ವಸತಿ ಯೋಜನೆ ಸೇರಿದಂತೆ ನಾನಾ ಯೋಜನೆಗಳಲ್ಲಿರುವ ಮನೆಗಳನ್ನು ಶೀಘ್ರವೇ ನಿರ್ಮಿಸಿ ಫಲಾನುಭವಿಗಳಿಗೆ ಒದಗಿಸಲಾಗುವುದು. ರಾಜ್ಯದಲ್ಲಿ ಗಣನೀಯ ಸೇವೆ ಸಲ್ಲಿಸಿದವರನ್ನು ಪದ್ಮ ಪ್ರಶಸ್ತಿಗಳಿಗೆ ಆಯ್ಕೆ ಮಾಡಲು ಸಾಧಕರನ್ನು ಗುರುತಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಈ ವರದಿಯನ್ನು ಆಧರಿಸಿ ಸಚಿವ ಸಂಪುಟ ಉಪ ಸಮಿತಿ ಅಂತಿಮ ಶಿಫಾರಸ್ಸುಗಳನ್ನು ಮಾಡಲಿದೆ.
ಕೋವಿಡ್-19ರ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಹಣಕಾಸು ಬಿಕ್ಕಟ್ಟಿನಲ್ಲಿ ಈಗಾಗಲೇ ತೀರ್ಮಾನಿಸಿರುವಂತೆ ಶಾಸಕರು, ಸಚಿವರ ಶೇಕಡ 30 ರಷ್ಟು ವೇತನ ಕಡಿತ ಮಾಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದರು.