ನವದೆಹಲಿ, ಜೂ. 26 (DaijiworldNews/MB) : ಭಾರತ ಚೀನಾ ಗಡಿ ಸಂಘರ್ಷಕ್ಕೆ ಸಂಬಂಧಿಸಿ ಕಾಂಗ್ರೆಸ್ ಟೀಕೆ ಮಾಡುತ್ತಿದ್ದು ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ, 2005-06ರಲ್ಲಿ ರಾಜೀವ್ ಗಾಂಧಿ ಫೌಂಡೇಶನ್ಗಾಗಿ ಚೀನಾದಿಂದ ಹಣ ಪಡೆಯಲಾಗಿದೆ ಎಂದು ಆರೋಪಿಸಿದೆ.
ಈ ಬಗ್ಗೆ ಕಾನೂನು ವ್ಯವಹಾರಗಳ ಸಚಿವ ರವಿ ಶಂಕರ್ ಪ್ರಸಾದ್ ಮಾತನಾಡಿ, '2005-06ರ ವಾರ್ಷಿಕ ವರದಿ ಪ್ರಕಾರವಾಗಿ ಚೀನಾದ ಪೀಪಲ್ಸ್ ರಿಪಬ್ಲಿಕ್ ರಾಯಭಾರಿ ಮೂಲಕವಾಗಿ ರಾಜೀವ್ ಗಾಂಧಿ ಫೌಂಡೇಶನ್ ಹಣ ಪಡೆಯಲಾಗಿದೆ' ಎಂದು ದೂರಿದ್ದಾರೆ.
'ಈ ಹಣವನ್ನು ಸಾಮಾನ್ಯ ದಾನಿಗಳ ಪಟ್ಟಿಯಲ್ಲೇ ನೀಡಲಾಗಿದೆ. ಹಾಗಾದರೆ ಆಗ ಆಡಳಿತ ನಡೆಸುತ್ತಿದ್ದ ಯುಪಿಎ ಸರ್ಕಾರ ಚೀನಾದಿಂದ ಲಂಚ ಪಡೆದಿತ್ತೇ? ಎಂದು ಅನುಮಾನ ವ್ಯಕ್ತಪಡಿಸಿರುವ ಅವರು, ಅಂದು ಭಾರತ ಸರ್ಕಾರ ಚೀನಾ ಪರವಾಗಿ ಮಾತನಾಡಿದೆ. ಚೀನಾದಿಂದ ಹಣ ಪಡೆದ ಬಳಿಕ ಚೀನಾದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವಂತೆ ಫೌಂಡೇಶನ್ ಶಿಫಾರಸು ಮಾಡಿದ್ದು ಸತ್ಯವಲ್ಲವೇ' ಎಂದು ಕೂಡಾ ಕೇಳಿದ್ದಾರೆ.
'ಈ ಕೊಡುಗೆಯ ಕುರಿತಾಗಿ ಸರ್ಕಾರದ ದಾಖಲೆಗಳಲ್ಲಿ ಎಲ್ಲೂ ಕೂಡಾ ನಮೂದಿಸಿಲ್ಲ. ಈ ಹಣವನ್ನು ಚೀನಾದಿಂದ ಪಡೆದಿದ್ದಲ್ಲಿ ಇದನ್ನು ಯಾವುದಕ್ಕೆ ಬಳಸಲಾಗಿದೆ ಎಂದು ಚೀನಾ ಉತ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ರಾಜೀವ್ ಗಾಂಧಿ ಫೌಂಡೇಶನ್ನ ಅಧ್ಯಕ್ಷೆಯೂ ಆಗಿದ್ದು ಈ ಮಂಡಳಿಯಲ್ಲಿ ಡಾ ಮನಮೋಹನ್ ಸಿಂಗ್, ರಾಹುಲ್ ಗಾಂಧಿ, ಪಿ ಚಿದಂಬರಂ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಕೂಡಾ ಇದ್ದಾರೆ.
ಇನ್ನು ಬಿಜೆಪಿ ಆರೋಪಕ್ಕೆ ಪುನಃ ತಿರುಗೇಟು ನೀಡಿರುವ ಕಾಂಗ್ರೆಸ್, 'ಗಡಿ ವಿವಾದ ಹಾಗೂ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ವಿಷಯದಿಂದ ಬೇರೆಡೆಗೆ ಗಮನವನ್ನು ತಿರುಗಿಸಲು ಬಿಜೆಪಿ ಈ ರೀತಿ ಹೇಳುತ್ತಿದ್ದು ಚೀನಾದಿಂದ ಹಣವನ್ನು ಪಾರದರ್ಶಕವಾಗಿ ಪಡೆಯಲಾಗಿದ್ದು ವೆಬ್ಸೈಟ್ನಲ್ಲಿ ಎಲ್ಲಾ ವಿವರಗಳನ್ನು ಹಾಕಲಾಗಿದೆ. ಇನ್ನು ಸರ್ಕಾರದ ಫೌಂಡೇಶನ್ಗಳಾದ ವಿವೇಕಾನಂದ ಫೌಂಡೇಶನ್ ಕೂಡಾ ಬೇರೆ ಬೇರೆ ಮೂಲದಿಂದ ಹಣ ಪಡೆದಿದ್ದು ಅದರ ಅರ್ಥ ದೇಶ ವಿರೋಧಿಗಳೆಂದು ಅಲ್ಲ' ಎಂದು ಹೇಳಿದೆ.