ಬೆಂಗಳೂರು, ಜೂ 26(DaijiworldNews/PY) : 14 ವರ್ಷದ ಹುಡುಗಿಯೋರ್ವಳು ತನ್ನ ಗೆಳೆಯನನ್ನು ಭೇಟಿಯಾಗಲು ಹೈದರಾಬಾದ್ಗೆ ಪರಾರಿಯಾಗುತ್ತಿದ್ದ ಸಂದರ್ಭ ಆಕೆಯ ತಂದೆಯ ಕೈಗೆ ಸಿಕ್ಕಿಬಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಹುಡುಗಿಯು ಉತ್ತರಹಳ್ಳಿಯ ಎಜಿಎಸ್ ಲೇಔಟ್ ನಿವಾಸಿಯಾಗಿದ್ದು, ಆಕೆ ಬೆಂಗಳೂರಿನ ಹೆಸರಾಂತ ಶಾಲೆಯೊಂದರಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು.
ಈ ಹುಡುಗಿಗೆ ಇನ್ಸ್ಟಾಗ್ರಾಂನಲ್ಲಿ ವಿಶಾಲ್ ಎನ್ನುವ ಹುಡುಗನ ಪರಿಚಯವಾಗಿತ್ತು. ಆತನೊಂದಿಗೆ ಪ್ರತೀದಿನ ಚಾಟ್ ಮಾಡುತ್ತಿದ್ದು, ಕೆಲವು ದಿನಗಳಲ್ಲಿ ಇಬ್ಬರು ಪ್ರೀತಿಸಲು ಶುರು ಮಾಡಿದ್ದರು. ಅಲ್ಲದೇ, ತಮ್ಮ ಫೋಟೋಗಳನ್ನು ಶೇರ್ ಮಡಿಕೊಳ್ಳುತ್ತಿದ್ದರು. ಆದರೆ, ವಿಶಾಲ್ ಎಂಬಾತ ನಾನು ಹೈದರಾಬಾದ್ ಮೂಲದವನು, ನಾನು ನಿನ್ನೊಂದಿಗೆ ಇರಲು ಬಯಸುತ್ತೇನೆ ಎಂದು ಹುಡುಗಿಯನ್ನು ನಂಬಿಸಿದ್ದಾನೆ. ವಿಶಾಲ್ನ ಮಾತನ್ನು ನಂಬಿದ ಆಕೆ ಆತನೊಂದಿಗೆ ವಾಸ ಮಾಡಲು ತನ್ನ ಕುಟುಂಬವನ್ನು ಬಿಡಲು ತೀರ್ಮಾನ ಮಾಡಿದ್ದಳು.
ಜೂನ್ 8 ರಂದು ಬೆಳಗ್ಗೆ 10.30ರ ಸುಮಾರಿಗೆ ಆಕೆ ನಾನು ಸಂಗೀತ ತರಗತಿಗೆ ಹೋಗಿ ಬರುತ್ತೇನೆ ಎಂದು ಮನೆಯಿಂದ ಹೋಗಿದ್ದು, ಆಕೆ ಅಲ್ಲಿಂದ ವಿಮಾನ ನಿಲ್ದಾಣಕ್ಕೆ ತೆರಳಿದ್ದಾಳೆ. ಆದರೆ, ಮಗಳು ಸಂಗೀತ ತರಗತಿಗೆ ಎಂದು ಹೋಗಿ ತುಂಬಾ ಸಮಯವಾದರು ಮನೆಗೆ ಮರಳದ ಕಾರಣ ಪೋಷಕರು ಗಾಬರಿಯಾಗಿದ್ದರು. ತಕ್ಷಣವೇ ಆಕೆಯ ತಂದೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿದಾಗ ಅಲ್ಲಿ ಮಗಳು ಇರುವುದು ತಿಳಿದುಬಂದಿದೆ. ಬಳಿಕ ಆಕೆಯನ್ನು ಮನೆಗೆ ಕರೆದುಕೊಂಡು ಬಂದಿದ್ದು, ಆಕೆಗೆ ಬುದ್ದಿವಾದ ಹೇಳಿದ್ದಾರೆ. ಈ ಬಗ್ಗೆ ಜೂನ್ 17ರಂದು ಆಕೆಯ ಪೋಷಕರು ದಕ್ಷಿಣ ಸಿಇಎನ್ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ಮಗಳ ನಡವಳಿಕೆಯ ಬಗ್ಗೆ ಆಕೆಯ ತಂದೆಗೆ ಕೆಲವು ದಿನಗಳ ಹಿಂದೆ ಸಂಶಯ ಮೂಡಿತ್ತು. ಹಾಗಾಗಿ ಮಗಳು ನಾಪತ್ತೆಯಾಗಿದ್ದಾಳೆ ಎಂದ ತಕ್ಷಣ ಅವರು ಮಗಳ ಇನ್ಸ್ಟಾಗ್ರಾಂ ಖಾತೆಯನ್ನು ಡಿಕೋಡ್ ಮಾಡಿದ್ದು, ಮಗಳು ವಿಶಾಲ್ ಎಂಬ ಹುಡುಗನೊಂದಿಗೆ ಚಾಟ್ ಮಾಡಿರುವ ಬಗ್ಗೆ ತಿಳಿದುಕೊಂಡಿದ್ದಾರೆ. ಅಲ್ಲದೇ, ತನ್ನ ಖಾಸಗಿ ಪೋಟೋಗಳನ್ನು ಹಂಚಿಕೊಂಡಿರುವ ಬಗ್ಗೆ ಹಾಗೂ ಟಿಕೆಟ್ ಕೂಡಾ ಬುಕ್ ಮಾಡಿದ್ದು, ಹೈದರಾಬಾದ್ಗೆ ಬರುವಂತೆ ಹೇಳಿದ್ದ ಬಗ್ಗೆಯೂ ತಿಳಿದುಕೊಂಡಿದ್ದಾರೆ.
ಇದರೊಂದಿಗೆ ವಿಶಾಲ್ ಆಕೆಗೆ 18 ವರ್ಷವಾಗಿದೆ ಎಂದು ತೋರಿಸಲು ಆಕೆಯ ಹೆಸರಿನಲ್ಲಿ ನಕಲಿ ಎಸ್.ಎಸ್.ಎಲ್.ಸಿ ಅಂಕಪಟ್ಟಿಯನ್ನು ಕೂಡಾ ಸಿದ್ದ ಮಾಡಿದ್ದು, ಅಲ್ಲದೇ, ಆಕೆಯೊಂದಿಗೆ 15 ಫೋಟೋಗಳು ಹಾಗೂ 10,000 ರೂ. ತರುವಂತೆ ಹೇಳಿದ್ಧಾನೆ. ವಿಶಾಲ್ ಹೇಳಿದಂತೆ ಹುಡುಗಿಯೂ ಕೂಡಾ ಎಲ್ಲವನ್ನು ತೆಗೆದುಕೊಂಡು ಹೋಗಿದ್ದಳು ಎಂದು ತನಿಖೆಯ ಮೂಲಕ ತಿಳಿದುಬಂದಿದೆ.
ಹುಡುಗನ ಬಗ್ಗೆ ಮಾಹಿತಿ ನೀಡಿದ ಪೊಲೀಸರು, ಆತನ ವಯಸ್ಸು ಅಥವಾ ಆತನ ಗುರುತಿನ ಬಗ್ಗೆ ಯಾವುದೇ ವಿವರ ದೊರಕಿಲ್ಲ ಎಂದಿದ್ದಾರೆ.
ಘಟನೆಯ ಬಗ್ಗೆ ಪೋಕ್ಸೋ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಕೊರೊನಾ ಲಾಕ್ಡೌನ್ ನಿಟ್ಟಿನಲ್ಲಿ ಆನ್ಲೈನ್ ತರಗತಿಗಳು ನಡೆಯುತ್ತಿವೆ. ಈ ಕಾರಣದಿಂದ ಪೋಷಕರು ತಮ್ಮ ಮಕ್ಕಳನ್ನು ನೋಡಿಕೊಳ್ಳಿ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.