ನವದೆಹಲಿ, ಜೂ. 26 (DaijiworldNews/MB) : ''ಕೊರೊನಾ ಸೋಂಕಿಗೆ ಲಸಿಕೆ ಅಭಿವೃದ್ಧಿಯಾಗುವವರೆಗೆ ಎರಡು ಗಜಗಳಷ್ಟು ಅಂತರ ಕಾಯ್ದುಕೊಳ್ಳಬೇಕು ಹಾಗೂ ಮಾಸ್ಕ್ ಧರಿಸಬೇಕು ಎಂದು'' ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ಹೇಳಿದ್ದಾರೆ.
'ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ರೋಜಗಾರ್ ಅಭಿಯಾನ್' ಅಡಿಯಲ್ಲಿ ಉತ್ತರ ಪ್ರದೇಶದ ವಲಸೆ ಕಾರ್ಮಿಕರಿಗಾಗಿ ಆತ್ಮ ನಿರ್ಭರ್ ಉತ್ತರ ಪ್ರದೇಶ ರೋಜ್ಗಾರ್ ಅಭಿಯಾನವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ''ನಾವೆಲ್ಲರೂ ಜೀವನದಲ್ಲಿ ಏರು ತಗ್ಗುಗಳನ್ನು ನೋಡಿದ್ದೇವೆ. ನಮ್ಮ ಸಾಮಾಜಿಕ ಜೀವನದಲ್ಲಿ ತೊಂದರೆಗಳು ಇರುತ್ತದೆ. ಆದರೆ ಯಾರೂ ಕೂಡಾ ಇಡೀ ವಿಶ್ವವೇ ಒಂದೇ ಸಮಯದಲ್ಲಿ ತೊಂದರೆಯನ್ನು ಎದುರಿಸುತ್ತದೆ ಎಂದು ಭಾವಿಸಿರಲಿಲ್ಲ. ನಾವು ಇದರಿಂದ ಯಾವಾಗ ಹೊರ ಬರುತ್ತೇವೆ ಎಂದು ತಿಳಿದಿಲ್ಲ. ಕೊರೊನಾಗೆ ಲಸಿಕೆ ಅಭಿವೃದ್ಧಿಯಾಗುವವರೆಗೂ ಕೊರೊನಾ ನಿಯಂತ್ರಿಸಲು ನಾವೆಲ್ಲರೂ ಎರಡು ಗಜ ಅಂತರ ಕಾಯ್ದುಕೊಳ್ಳಬೇಕು ಹಾಗೂ ಮಾಸ್ಕ್ ಧರಿಸಬೇಕು'' ಎಂದು ತಿಳಿಸಿದ್ದಾರೆ.
''ಶ್ರಮದ ತಾಕತ್ತು ಏನು ಎಂದು ವಲಸೆ ಕಾರ್ಮಿಕರಿಂದ ತಿಳಿದಿದೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ರೋಜಗಾರ್ ಅಭಿಯಾನ ಶ್ರಮದ ತಾಕತ್ತಿನ ಮೇಲೆ ಆಧರಿಸಿದೆ. ಈ ಶಕ್ತಿಯೇ ಆತ್ಮ ನಿರ್ಭರ್ ಉತ್ತರ ಪ್ರದೇಶ ರೋಜ್ಗಾರ್ ಅಭಿಯಾನಕ್ಕೆ ಸ್ಫೂರ್ತಿ ನೀಡಿದೆ. ನನಗೆ ಈ ರೀತಿಯ ಯೋಜನೆಯನ್ನು ಉತ್ತರ ಪ್ರದೇಶದಂತೆ ಬೇರೆ ರಾಜ್ಯಗಳು ಜಾರಿಮಾಡುತ್ತದೆ ಎಂಬ ನಂಬಿಕೆಯಿದೆ'' ಎಂದು ಭರವಸೆ ವ್ಯಕ್ತಪಡಿಸಿದ್ದಾರೆ
''ಈ ಕೊರೊನಾ ವೈರಸ್ ಸಂಕಷ್ಟದ ಸಂದರ್ಭದಲ್ಲಿ ಉತ್ತರ ಪ್ರದೇಶ ಸರ್ಕಾರವು ಧೈರ್ಯ ಮತ್ತು ಮನೋಧರ್ಮವನ್ನು ತೋರಿದೆ. ರಾಜ್ಯ ಕೊರೊನಾ ವೈರಸ್ ವಿರುದ್ಧ ಹೋರಾಟದಲ್ಲಿ ಯಶಸ್ವಿಯಾಗಿದ್ದು ಈ ರಾಜ್ಯ ಕೊರೊನಾದ ವಿರುದ್ಧ ಹೋರಾಡಿ ಸೋಂಕು ನಿಯಂತ್ರಣ ಮಾಡಿರುವುದು ಅಸಾಧಾರಣ ಕಾರ್ಯ'' ಎಂದಿದ್ದಾರೆ.