ಬೆಂಗಳೂರು, ಜೂ 26(DaijiworldNews/PY) : ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೆಚ್ಚು ಜನರನ್ನು ಪರೀಕ್ಷೆಗೆ ಒಳಪಡಿಸಿದರೆ, ಇನ್ನೂ ಹೆಚ್ಚಿನ ಪ್ರಕರಣಗಳು ಪತ್ತೆಯಾಗಬಹುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಸಿಎಂ ಬಿಎಸ್ವೈ ಅವರು ಶಾಸಕರನ್ನು ಕರೆದು ಯಾಕೆ ಸಭೆ ನಡೆಸುತ್ತಿದ್ದಾರೆ ಎಂದು ಗೊತ್ತಿಲ್ಲ ಎಂದರು.
ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸದೇ ಇರುವ ಕಾರಣ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಜಾಸ್ತಿಯಾಗುತ್ತಿದೆ. ಆಗ ಲಾಕ್ಡೌನ್ ಮಾಡಿದ್ದು ತಪ್ಪು. ಆದರೆ, ನಿಜವಾಗಲೂ ಈಗ ಲಾಕ್ಡೌನ್ ಜಾರಿ ಮಾಡಬೇಕಿತ್ತು. ಕೊರೊನಾ ನಿಯಂತ್ರಣ ಮಾಡುವುದರಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಹೇಳಿದರು.
ಕೊರೊನಾ ಸೋಂಕು ಜುಲೈ, ಆಗಸ್ಟ್ ತಿಂಗಳಿನಲ್ಲಿ ಹೆಚ್ಚಾಗುತ್ತದೆ ಎಂದು ತಜ್ಞರು ಹೇಳಿದ್ದರು. ಸರ್ವ ಪಕ್ಷಗಳ ಸಭೆ ಕರೆದರೆ ಅಲ್ಲಿ ಇವರ ತಪ್ಪನ್ನು ಹೇಳುತ್ತೇವೆ. ಸುಮ್ಮನೆ ಹೇಳುತ್ತಿಲ್ಲ ಎಂದರು.