ಬೆಂಗಳೂರು, ಜೂ 26 (Daijiworld News/MSP): ಅಕ್ರಮ ಆಸ್ತಿ ಸಂಪಾದನೆ ಆರೋಪದಡಿಯಲ್ಲಿ ದೋಷಿಯಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವವ ಐಎಡಿಎಂಕೆ ಉಚ್ಚಾಟಿತ ನಾಯಕಿ ವಿ.ಕೆ.ಶಶಿಕಲಾ ನಟರಾಜನ್ ಅವರು ಶೀಘ್ರದಲ್ಲೇ ಜೈಲಿಂದ ಬಿಡುಗಡೆಯಾಗುತ್ತಾರೆ ಎಂಬ ವದಂತಿಯನ್ನು ಬೆಂಗಳೂರು ಕೇಂದ್ರ ಕಾರಾಗೃಹ ಅಧಿಕಾರಿಗಳು ನಿರಾಕರಿಸಿದ್ದಾರೆ.
ಮುಂದಿನ 30 ದಿನಗಳಲ್ಲಿ ಬಿಡುಗಡೆಯಾಗಲಿರುವ ಕೈದಿಗಳ ಪಟ್ಟಿ ಸಿದ್ಧವಾಗಿದ್ದು,ಈ ಪಟ್ಟಿಯಲ್ಲಿ ಶಶಿಕಲಾ ಅವರ ಹೆಸರಿಲ್ಲ ಎಂದು ಜೈಲು ಇಲಾಖೆ ಮೂಲಗಳು ತಿಳಿಸಿವೆ.
ವಿ.ಕೆ ಶಶಿಕಲಾ ಪರಪ್ಪನ ಅಗ್ರಹಾರ ಜೈಲಿಂದ ಬಿಡುಗಡೆಗೊಳ್ಳುತ್ತಾರೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಆದರೆ ಇದು ಕೇವಲ ವದಂತಿ ಎಂಬುವುದು ಕಾರಾಗೃಹ ಅಧಿಕಾರಿಗಳು ನಿರಾಕರಣೆಯಿಂದ ಸ್ಪಷ್ಟಗೊಂಡಿದೆ
ಕರ್ನಾಟಕ ಕಾರಾಗೃಹ ಇಲಾಖೆಯ ನಿಯಮಾವಳಿಗಳ ಪ್ರಕಾರ, ಸನ್ನಡತೆಗಾಗಿ ತಿಂಗಳಲ್ಲಿ ಮೂರು ದಿನ, ಶಿಸ್ತು ಮತ್ತಿತರೆ ಕಾರಣಗಳಿಗಾಗಿ ಮೂರು ದಿನ ರಜೆ ನಿಗದಿ ಮಾಡಲಾಗಿರುತ್ತದೆ. ವಿಶೇಷಾಧಿಕಾರದಲ್ಲಿ ಜೈಲು ಅಧೀಕ್ಷಕರಾದ 30 ದಿನಗಳ ಪೆರೋಲ್ ಮಾಡಬಹುದಾಗಿದೆ. ಮತ್ತು ಐಜಿ 60 ದಿನ ಪೆರೋಲ್ ನೀಡಬಹುದಾಗಿದೆ.
ವಿ.ಕೆ ಶಶಿಕಲಾ ನಟರಾಜನ್ ಅಕ್ರಮ ಆಸ್ತಿ ಸಂಪಾದನೆ ಆರೋಪದಡಿಯಲ್ಲಿ ನಾಲ್ಕು ವರ್ಷ ಜೈಲು ಶಿಕ್ಷೆಗೆ ಒಳಗಾಗಿದ್ದಾರೆ. 2017 ರಲ್ಲಿ ಜೈಲು ಶಿಕ್ಷೆಗೆ ಒಳಗಾದ ಅವರ ಶಿಕ್ಷೆಯ ಅವಧಿ ಇನ್ನೂ ಮುಕ್ತಾಯಗೊಂಡಿಲ್ಲ.
ಅಪರಾಧಿಯನ್ನು ಬಿಡುಗಡೆ ಮಾಡುವ ವೇಳೆ ಈ ಎಲ್ಲಾ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಹೀಗಾಗಿ ಆಗಸ್ಟ್ ನಲ್ಲಿ ಬಿಡುಗಡೆಯಾಗಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎಂದು ಜೈಲು ಇಲಾಖೆ ಮೂಲಗಳು ತಿಳಿಸಿವೆ.