ದಾವಣಗೆರೆ, ಜೂ 26(DaijiworldNews/PY) : ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಮನವಿ ಬಂದರೆ ರೈಲು ಸೇವೆ ಪುನರಾರಂಭಿಸಲಾಗುವುದು ಎಂದು ರೈಲ್ವೆ ರಾಜ್ಯ ಖಾತೆ ಸಚಿವ ಸುರೇಶ ಅಂಗಡಿ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ವ್ಯಾಪಿಸುತ್ತಿರುವ ಕಾರಣ ಅಂತರ ಕಾಯ್ದುಕೊಳ್ಳುವುದು ಅವಶ್ಯವಾಗಿದೆ. ಕೊರೊನಾ ಇರುವ ಕಾರಣ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಮುಖ್ಯ. ಇವೆಲ್ಲದರೊಂದಿಗೆ ದೇಶದ ಆರ್ಥಿಕತೆಯೂ ವೃದ್ದಿಯಾಗಬೇಕು ಎಂದು ತಿಳಿಸಿದರು.
ದೇಶದ ಎಲ್ಲಾ ರೈಲು ಮಾರ್ಗಗಳನ್ನು 2022ರ ಅಂತ್ಯದೊಳಗಾಗಿ ವಿದ್ಯುದ್ದೀಕರಣಗೊಳಿಸುವಂತ ಉದ್ದೇಶ ಹೊಂದಿದ್ದು, ಇದೇ ವೇಳೆ ಮೀರಜ್ನಿಂದ ಬೆಂಗಳೂರಿನವರೆಗೆ ಜೋಡಿ ಮಾರ್ಗ ಕಾಮಗಾರಿಯನ್ನೂ ಕೂಡಾ ಸಂಪೂರ್ಣಗೊಳಿಸುವಂತಹ ಗುರಿಯನ್ನು ಹೊಂದಿದ್ದೇವೆ. ಮುಂಬೈ-ಕೋಲ್ಕತ್ತ ಮಧ್ಯದ ಜೋಡಿ ಮಾರ್ಗ ಕಾಮಗಾರಿಯ ಆದ್ಯತೆಯನ್ನೂ ಸಹ ಕೈಗೆತ್ತಿಕೊಳ್ಳಲಾಗಿದೆ. ಈ ಕಾಮಗಾರಿಯು ರಫ್ತಿಗೆ ಅನುಕೂಲವಾಗುತ್ತದೆ ಎಂದರು.
ಸದ್ಯ ಶ್ರಮಿಕ್ ರೈಲಿನಲ್ಲಿ ತಮ್ಮ ಊರುಗಳಿಗೆ ಕಾರ್ಮಿಕರು ಹಿಂದಿರುಗುತ್ತಿದ್ದಾರೆ. ನಮ್ಮ ಕಾರ್ಮಿಕರನ್ನು ನಮ್ಮ ರಾಜ್ಯದಲ್ಲೇ ಉಳಿಸಿಕೊಳ್ಳಬೇಕಾಗಿದ್ದು, ಈ ಕಾರಣದಿಂದ ಅವರಿಗೆ ಉದ್ಯೋಗ ಖಾತ್ರಿಯಡಿ ಕೆಲಸ ಕೊಡಲು ಆದ್ಯತೆ ನೀಡಲಾಗುತ್ತದೆ ಎಂದು ತಿಳಿಸಿದರು.