ನಾಸಿಕ್, ಜೂ 26 (Daijiworld News/MSP): 1993 ರ ಮುಂಬೈ ಸರಣಿ ಸ್ಫೋಟ ಪ್ರಕರಣದ ಅಪರಾಧಿಗಳಲ್ಲಿ ಒಬ್ಬನಾದ ಯೂಸುಫ್ ಮೆಮನ್ (54), ನಾಸಿಕ್ ನ ಕೇಂದ್ರ ಕಾರಾಗೃಹದಲ್ಲಿ ಶುಕ್ರವಾರ ಸಾವಿಗೀಡಾಗಿದ್ದಾನೆ.
ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಈತ ಬೆಳಿಗ್ಗೆ 10 ಗಂಟೆ ಸುಮಾರಿಗೆ ಹಲ್ಲುಜ್ಜುವಾಗ ಹೃದಯಾಘಾತವಾಗಿ ಕುಸಿದು ಬಿದ್ದಿದ್ದಾನೆ. ತಕ್ಷಣ ಈತನನ್ನು ನಾಸಿಕ್ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಚಿಕಿತ್ಸೆಯ ಸಮಯದಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಜೈಲು ಅಧೀಕ್ಷಕರು ತಿಳಿಸಿದ್ದಾರೆ.
ಜುಲೈ 26, 2018 ರಿಂದ 1993 ರ ಬಾಂಬೆ ಸ್ಫೋಟಕ್ಕೆ ಸಂಬಂಧಿಸಿದಂತೆ ಉಸುಫ್ ಮೆಮನ್ ಮತ್ತು ಅವರ ಸಹೋದರ ಇಸಾ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದರು.
1993ರ ಮುಂಬೈ ಸರಣಿ ಸ್ಫೋಟದ ಸಂಚುಕೋರ ಟೈಗರ್ ಮೆಮನ್ನ ಕಿರಿಯ ಸಹೋದರ. ಟೈಗರ್ ವೆಮನ್ ಸದ್ಯ ಪಾಕಿಸ್ತಾನದಲ್ಲಿ ಬಂಧಿಯಾಗಿದ್ದಾನೆ. ಯೂಸುಫ್ ಮೆಮನ್ನ ಹಿರಿಯ ಸಹೋದರ ಯಾಕೂಬ್ ಮೆಮನ್ನನ್ನು ಕೆಲವು ವರ್ಷಗಳ ಹಿಂದೆ ನಾಗ್ಪುರ ಜೈಲಿನಲ್ಲಿ ಗಲ್ಲಿಗೇರಿಸಲಾಗಿತ್ತು.
ಮುಂಬೈ ಸರಣಿ ಸ್ಫೋಟಕ್ಕೆ ಸಂಬಂಧಿಸಿದಂತೆ ಮೆಮನ್ನ ತಂದೆ ಅಬ್ದುಲ್ ರಜಾಕ್ ಮೆಮನ್ ಮತ್ತು ತಾಯಿ ಹನೀಫಾ ಸೇರಿದಂತೆ ಮೆಮನ್ ಕುಟುಂಬದ ಆರು ಮಂದಿಯನ್ನು ಸಿಬಿಐ 1994ರಲ್ಲಿ ಬಂಧಿಸಿತ್ತು.