ಹಾಸನ, ಜೂ 26(DaijiworldNews/PY) : ಸಿಎಂ ಬಿಎಸ್ವೈ ಅವರು ದ್ವೇಷದ ರಾಜಕೀಯ ಮಾಡುತ್ತಿದ್ದಾರೆ. ಬಿಜೆಪಿ ಲೂಟಿಕೋರ ಸರ್ಕಾರವಾಗಿದೆ. ರಾಜ್ಯ ಸರ್ಕಾರವು ಕೊರೊನಾ ಹೆಸರಿನಲ್ಲಿ ಲೂಟಿ ಮಾಡುತ್ತಿದೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಸಿಎಂ ಅವರು ನಮಗೆ ಸಾರ್ವಜನಿಕ ವಸತಿ ಸಮಿತಿ ಅಧ್ಯಕ್ಷರನ್ನು ಭೇಟಿ ಮಾಡಲು ಅವಕಾಶ ನೀಡುತ್ತಿಲ್ಲ. ಈ ಕಾರಣದಿಂದ ಹಾಸನದ ಜನರು ಕೋಪಗೊಂಡಿದ್ದಾರೆ. ಸರ್ಕಾರಕ್ಕೆ ಜಿಲ್ಲೆಯ ಜನರ ಶಾಪ ಒಳ್ಳೆಯದಲ್ಲ ಎಂದರು.
ಸಿಎಂ ಬಿಎಸ್ವೈ ಅವರ ಅವರ ಅಳಿಯ ಎಂಜಿನಿಯರ್ ಅವರನ್ನು ನಾನು ಲೋಕೋಪಯೋಗಿ ಸಚಿವನಾಗಿದ್ದ ಸಂದರ್ಭ ಹುಬ್ಬಳ್ಳಿಯಲ್ಲೇ ಮುಂದುವರಿಯಲು ತಿಳಿಸಿದ್ದೆ. ಅಲ್ಲದೇ, ಅವರಿಗೆ ಬಡ್ತಿ ನೀಡಿದ್ದೆ. ನಾನು ಸಿಎಂ ಬಿಎಸ್ವೈ ಅವರ ಹಾಗೂ ಕೆ.ಎಸ್.ಈಶ್ವರಪ್ಪ ಅವರ ಎಲ್ಲಾ ಕೆಲಸವನ್ನು ಮಾಡಿಕೊಟ್ಟಿದ್ದೇನೆ. ಆದರೆ, ಸಿಎಂ ಅವರು ಈಗ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಹೇಳಿದರು.
ಸರ್ಕಾರವು ಹಾಸನಕ್ಕೆ ಮೊಸಳೆ ಹೊಸಳ್ಳಿ ಎಂಜಿನಿಯರಿಂಗ್ ಕಾಲೇಜು ಸ್ಥಳಾಂತರಿಸಲು ಆದೇಶ ನೀಡಿದೆ. ಅಲ್ಲದೇ ಸಿಎಂ ಅವರು ವಿಧಾನ ಸಭೆಯಲ್ಲಿ ಕಾಲೇಜು ಮುಚ್ಚುವುದಿಲ್ಲ ಎಂದು ಹೇಳಿದ್ದಾರೆ. ಒಂದು ವೇಳೆ ಅವರು ಹೇಳಿದಂತೆ ಮಾಡದಿದ್ದರೆ. ಅವರ ಮನೆ ಮುಂದೆ ಧರಣಿ ಕೂರುತ್ತೇನೆ. ಅಲ್ಲದೆ, ಸಿಎಂ ಅವರ ವಿರುದ್ದ ಪ್ರಿವಿಲೇಜ್ ಕಮಿಟಿಗೆ ದೂರು ನೀಡುತ್ತೇನೆ. ಬಿಎಸ್ವೈ ಅವರ ಸರ್ಕಾರದಲ್ಲಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುವವರಿಗೆ ಸ್ಥಾನ ಇಲ್ಲ ಎಂದರು.