ಜೈಪುರ್ ಜೂ 27 (Daijiworld News/MSP): ಯೋಗ ಗುರು ರಾಮದೇವ್, ಪತಂಜಲಿ ಸಿಇಒ ಆಚಾರ್ಯ ಬಾಲಕೃಷ್ಣ ಮತ್ತು ನಾಲ್ಕು ಇತರರ ವಿರುದ್ಧ ಜೈಪುರದಲ್ಲಿ ಎಫ್ ಐಆರ್ ದಾಖಲಾಗಿದೆ.
ಕೊರೊನಾ ವೈರಸ್ ಗೆ ಪತಂಜಲಿ ಸಂಸ್ಥೆ ತಯಾರಿಸಿದ ಆಯುರ್ವೇದ ಕೊರೊನಿಲ್ ಔಷಧವೂ ಸೋಂಕಿತರನ್ನು ನೂರು ಶೇಕಡಾದಷ್ಟು ಗುಣಮುಖರಾಗುವಂತೆ ಮಾಡುತ್ತದೆ ಎಂದು ಜಾಹೀರಾತು ನೀಡಿತ್ತು. ತಪ್ಪು ಮಾಹಿತಿ ನೀಡುವ ಮೂಲಕ ಜನರ "ದಾರಿ ತಪ್ಪಿಸುತ್ತಿದ್ದಾರೆ" ಎಂದು ಎಫ್ಐಆರ್ ನಲ್ಲಿ ಆರೋಪಿಸಲಾಗಿದೆ.
ರಾಮದೇವ್, ಪತಂಜಲಿ ಆಯುರ್ವೇದ ಎಂಡಿ ಆಚಾರ್ಯ ಬಾಲಕೃಷ್ಣ, ವಿಜ್ಞಾನಿ ಅನುರಾಗ್ ವರ್ಷ್ನಿ, ನಿಮ್ಸ್ ಅಧ್ಯಕ್ಷ ಬಲ್ಬೀರ್ ಸಿಂಗ್ ತೋಮರ್ ಮತ್ತು ನಿರ್ದೇಶಕ ಅನುರಾಗ್ ತೋಮರ್ ವಿರುದ್ಧ ಜೈಪುರದ ಜ್ಯೋತಿ ನಗರ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಎಫ್ಐಆರ್ ದಾಖಲಿಸಲಾಗಿದೆ ಎಂದು ಜ್ಯೋತಿ ನಗರ ಪೊಲೀಸ್ ಠಾಣೆ ಎಸ್ಎಚ್ಒ ಸುಧೀರ್ ಕುಮಾರ್ ಉಪಾಧ್ಯಾಯವರು ತಿಳಿಸಿದ್ದಾರೆ.
ಸೆಕ್ಷನ್ 420 (ಚೀಟಿಂಗ್) ಸೇರಿದಂತೆ ಐಪಿಸಿಯ ವಿವಿಧ ವಿಭಾಗಗಳ ಅಡಿಯಲ್ಲಿ ತಪ್ಪುದಾರಿಗೆಳೆಯುವ ಪ್ರಚಾರದಲ್ಲಿ ತೊಡಗಿದ್ದಕ್ಕಾಗಿ ರಾಮ್ದೇವ್ ಸೇರಿದಂತೆ ಐದು ಜನರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ದೂರುದಾರ ಬಲರಾಮ್ ಜಖರ್ ತಿಳಿಸಿದ್ದಾರೆ.