ನವದೆಹಲಿ, ಜೂ. 27 (DaijiworldNews/MB) : ಅರ್ಧಸತ್ಯ ಮಾತನಾಡುವುದರಲ್ಲಿ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಪರಿಣತರು ಎಂದು ಕಾಂಗ್ರೆಸ್ ನಾಯಕ ಪಿ ಚಿದಂಬರಂ ಟೀಕೆ ಮಾಡಿದ್ದಾರೆ.
'2005ರಲ್ಲಿ ಕಾಂಗ್ರೆಸ್ ನೇತೃತ್ವದ ಡಾ ಮನಮೋಹನ್ ಸಿಂಗ್ ಸರ್ಕಾರದಲ್ಲಿ 20 ಲಕ್ಷ ರೂಪಾಯಿಗಳನ್ನು ಪ್ರಧಾನ ಮಂತ್ರಿ ಪರಿಹಾರ ನಿಧಿಯಿಂದ ರಾಜೀವ್ ಗಾಂಧಿ ಫೌಂಡೇಶನ್ ಗೆ ವರ್ಗಾವಣೆ ಮಾಡಲಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿರುವ ಅವರು, ''ಅರ್ಧಸತ್ಯ ಮಾತನಾಡುವುದರಲ್ಲಿ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಪರಿಣತರು. ಅವರು ಹೇಳಿದ ಅರ್ಧ ಸತ್ಯದ ಉಳಿದ ಭಾಗವನ್ನು ನನ್ನ ಸಹೋದ್ಯೋಗಿ ಶ್ರೀ ರಂದೀಪ್ ಸುರ್ಜೆವಾಲಾ ಅವರು ನಿನ್ನೆ ಬಹಿರಂಗಪಡಿಸಿದ್ದಾರೆ'' ಎಂದು ಹೇಳಿದ್ದಾರೆ.
''2005 ರಲ್ಲಿ ಅಂಡಮಾನ್ ಮತ್ತು ನಿಕೋಬಾರ್ನಲ್ಲಿ ಸುನಾಮಿ ಪರಿಹಾರ ಕಾರ್ಯಗಳಿಗಾಗಿ ರಾಜೀವ್ ಗಾಂಧಿ ಫೌಂಡೇಶನ್ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ 20 ಮಿಲಿಯನ್ ರೂಪಾಯಿಗಳನ್ನು ಪಡೆದಿದೆ ಎಂಬ ಅಂಶವನ್ನು ಬಿಜೆಪಿ ಏಕೆ ಮರೆಮಾಡಿದೆ? ಹಾಗೂ ಪ್ರತಿ ರೂಪಾಯಿಯನ್ನು ಯಾವ ಉದ್ದೇಶಕ್ಕಾಗಿ ಖರ್ಚು ಮಾಡಲಾಯಿತು ಎಂದು ತಿಳಿಸಿಲ್ಲ?'' ಎಂದು ಪ್ರಶ್ನಿಸಿದ್ದಾರೆ.
''15 ವರ್ಷಗಳ ಹಿಂದೆ ರಾಜೀವ್ ಗಾಂಧಿ ಫೌಂಡೇಶನ್ ನೀಡಲಾದ ಅನುದಾನಕ್ಕೆ ಹಾಗೂ ಮೋದಿ ಸರ್ಕಾರದ ಮೇಲ್ವಿಚಾರಣೆಯಲ್ಲಿ 2020 ರಲ್ಲಿ ಭಾರತೀಯ ಭೂಪ್ರದೇಶದ ಮೇಲೆ ಚೀನಾ ಪ್ರವೇಶಕ್ಕೆ ಏನು ಸಂಬಂಧವಿದೆ. ರಾಜೀವ್ ಗಾಂಧಿ ಫೌಂಡೇಶನ್ 20 ಲಕ್ಷ ರೂಪಾಯಿಗಳನ್ನು ಹಿಂದಿರುಗಿಸುತ್ತದೆ ಎಂದು ಭಾವಿಸೋಣ, ಆಗ ಚೀನಾ ಭಾರತದ ಭೂ ಭಾಗದಲ್ಲಿ ಮಾಡಿರುವ ಅತಿಕ್ರಮಣವನ್ನು ತೆರವುಗೊಳಿಸುತ್ತದೆ ಅಥವಾ ಯಥಾಸ್ಥಿತಿಯನ್ನು ಪುನಃಸ್ಥಾಪಿಸುವ ಬಗ್ಗೆ ಪ್ರಧಾನಿ ಮೋದಿ ದೇಶಕ್ಕೆ ಭರವಸೆ ನೀಡುತ್ತಾರೆಯೇ?'' ಎಂದು ಪ್ರಶ್ನಿಸಿದ್ದಾರೆ.
''ನಡ್ಡಾರವರೇ ವಾಸ್ತವಕ್ಕೆ ತಕ್ಕಂತೆ, ನಿಮ್ಮ ಅರೆಮನಸ್ಸಿನ ಸತ್ಯದಿಂದ ವಿರೂಪಗೊಂಡ ಭೂತಕಾಲದಲ್ಲಿ ಜೀವಿಸುವುದಿಲ್ಲ. ಮೊದಲು ಭಾರತೀಯ ಭೂಪ್ರದೇಶಕ್ಕೆ ಚೀನಾದ ಆಕ್ರಮಣಗಳ ಕುರಿತು ನಮ್ಮ ಪ್ರಶ್ನೆಗಳಿಗೆ ಉತ್ತರಿಸಿ'' ಎಂದು ಹೇಳಿದ್ದಾರೆ.