ಲಡಾಕ್, ಜೂ 27 (Daijiworld News/MSP): ಚೀನಾ ದ್ವಿಪಕ್ಷಿಯ ಒಪ್ಪಂದದ ಪ್ರಕಾರ ತನ್ನ ಸೇನೆಯನ್ನು ಹಿಂಪಡೆಯುವ ಬದಲು ಯುದ್ದೋತ್ಸಾಹದಲ್ಲಿ ಇದ್ದಂತೆ ತೋರುತ್ತಿದೆ.
ಲಡಾಖ್ನ ಪೂರ್ವಭಾಗದಲ್ಲಿ ಪ್ಯಾಂಗಾಂಗ್ ತ್ಸೊ ಸರೋವರದ ಉತ್ತರ ಭಾಗದಲ್ಲಿ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್ಎ) ಮೂಲಸೌಕರ್ಯಗಳ ಜತೆಗೆ ಹೆಲಿಪ್ಯಾಡ್ ನಿರ್ಮಾಣದಲ್ಲಿ ತೊಡಗಿದ್ದು ಆ ಪ್ರದೇಶದಲ್ಲಿ ತನ್ನ ಅಧಿಪತ್ಯ ಸ್ಥಾಪಿಸುವ ಹುನ್ನಾರ ನಡೆಸುತ್ತಿದೆ.
ತಮ್ಮ ಸೇನೆಯನ್ನು ಹಿಂಪಡೆಯುವುದಾಗಲಿ ಅಥವಾ ಏಪ್ರಿಲ್ನಲ್ಲಿದ್ದಂತೆ ಯಥಾಸ್ಥಿತಿ ಕಾಯ್ದುಕೊಳ್ಳುವ ಮನಸ್ಥಿತಿಯಲ್ಲಿ ಚೀನಾ ಇದ್ದಂತಿಲ್ಲ ಎಂದು ಭಾರತೀಯ ಸೇನಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಚೀನಿಯರ ಕುತಂತ್ರ ಬುದ್ದಿಗೆ ಮುನ್ನೆಚ್ಚರಿಕಾ ಕ್ರಮವಾಗಿ ಭಾರತೀಯ ಸೇನಾಪಡೆ ಕೂಡ ಸಾಕಷ್ಟು ಸಂಖ್ಯೆಯ ಯೋಧರನ್ನು ನಿಯೋಜಿಸಿದೆ. ಆದರೆ, ಸ್ಥಳೀಯ ಭೌಗೋಳಿಕ ಸಂರಚನೆಯಿಂದಾಗಿ ನೈಸರ್ಗಿಕ ಅಡಚಣೆಗಳು ಭಾರತದ ಪಾಲಿಗೆ ಕಠಿಣತೆಯನ್ನು ಹೆಚ್ಚಿಸುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ