ಬೆಂಗಳೂರು, ಜೂ 27 (Daijiworld News/MSP): ಕೊರೊನಾ ಪೀಡಿತ ಶತಾಯುಷಿ ಅಜ್ಜಿ ಇದೀಗ ಗುಣಮುಖರಾಗಿ ಕೊರೊನಾ ಗೆದ್ದು ಬರುವ ಮೂಲಕ ಕೊರೊನಾ ಬಗ್ಗೆ ಭಯಬೀತಗೊಳ್ಳುವ ಜನರಿಗೂ ಸಂದೇಶ ರವಾನಿಸಿದ್ದಾರೆ. ಕರ್ನಾಟಕದಲ್ಲಿ ಅತ್ಯಂತ ಹಿರಿಯ ವಯಸ್ಸಿನ ಗುಣಮುಖರಾಗಿ ಕೊರೊನಾ ರೋಗಿ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದಾರೆ.
ಕೊರೊನಾ ರೋಗಕ್ಕೆ ಭಯಗೊಂಡು ಆತ್ಮಹತ್ಯೆಯಂತಹ ವರದಿಗಳಾಗುತ್ತಿರುವಾಗ 100ನೇ ವಸಂತಕ್ಕೆ ಕಾಲಿಟ್ಟಿದ್ದ ವೃದ್ಧೆ ಕೊರೊನಾ ವಿರುದ್ದ ಹೋರಾಡಿ ವೈದ್ಯ ಲೋಕಕ್ಕೆ ಸಂತಸ ಮೂಡಿಸಿದ್ದಾರೆ
ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ನಿವಾಸಿಯಾಗಿರುವ ‘ಮಾರ್ಸಿಲಿನ್ ಸಾಲ್ಡಾನಾ’ ಎಂಬ ಶತಾಯುಷಿ ವೃದ್ಧೆಗೆ ತನ್ನ 100 ವರ್ಷದ ಹುಟ್ಟುಹಬ್ಬದಂದೇ ಸೋಂಕು ದೃಡಪಟ್ಟು ಜೂನ್ 18ಕ್ಕೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದರು. ಇವರ ಪುತ್ರ ಸೊಸೆ ಮೊಮ್ಮಕ್ಕಳಿಗೆ ಸೋಂಕು ತಗುಲಿತ್ತು.
ವಿಕ್ಟೋರಿಯಾ ಟ್ರಾಮ ಕೇರ್ ಸೆಂಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ಧೆ, ಕೇವಲ ಒಂಬತ್ತನೇ ದಿನಕ್ಕೆ ಗುಣಮುಖರಾಗಿ ಡಿಸ್ಜಾರ್ಜ್ ಆಗಿದ್ದಾರೆ. ವೃದ್ಧೆ ಗುಣಮುಖ ಆಗಿರುವುದು ವೈದ್ಯಲೋಕಕ್ಕೆ ಸಂತಸ ತಂದಿದೆ. ವಿಕ್ಟೋರಿಯಾ ಟ್ರಾಮ್ ಕೇರ್ ಸೆಂಟರ್ನಲ್ಲಿರುವ ರೋಗಿಗಳಿಗೆಲ್ಲ ಅಜ್ಜಿ ಧೈರ್ಯ ಹೇಳಿ ಬಂದಿದ್ದಾರೆ.