ಬೆಂಗಳೂರು, ಜೂ 27 (DaijiworldNews/SM): ರಾಜ್ಯದಲ್ಲಿ ಕೊರೊನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ಜೂನ್ 28ರಿಂದ ರಾತ್ರಿ 8ರಿಂದ ಬೆಳಗ್ಗೆ 5 ಗಂಟೆಯವರೆಗೂ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ. ಜತೆಗೆ, ಜುಲೈ 5ರ ಬಳಿಕ ರವಿವಾರ ಲಾಕ್ ಡೌನ್ ಗೆ ನಿರ್ಧಾರ ಕೈಗೊಳ್ಳಲಾಗಿದೆ. ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಮಹತ್ವದ್ದ ನಿರ್ಧಾರ ಕೈಗೊಳ್ಳಲಾಗಿದೆ.
ರಾಜ್ಯದಲ್ಲಿ ಪ್ರತಿನಿತ್ಯ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದೆ. ಲಾಕ್ ಡೌನ್ ಸಡಿಲಗೊಳಿಸಿದ ಬಳಿಕ ಸೋಂಕು ನಿಯಂತ್ರಣಕ್ಕೆ ತರಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಮಹತ್ವದ ತೀರ್ಮಾನಕ್ಕೆ ಬರಲಾಗಿದ್ದೆ. ಈ ಹಿಂದೆ ಮತ್ತೆ ರಾಜ್ಯದಲ್ಲಿ ಲಾಕ್ ಡೌನ್ ಮುಂದುವರೆಸಬೇಕೆಂಬ ಆಗ್ರಹಗಳು ಕೇಳಿಬಂದಿದ್ದವು. ಆದರೆ, ಇದಕ್ಕೆ ಮತ್ತೊಂದು ವರ್ಗ ವಿರೋಧ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯದಜನತೆಯ ಹಿತ ಕಾಪಾಡುವ ನಿಟ್ಟಿನಲ್ಲಿ ಸರಕಾರ ಈ ನಿರ್ಧಾರಕ್ಕೆ ಬಂದಿದೆ.
ಜುಲೈ 5ರಿಂದ ಭಾನುವಾರ ಲಾಕ್ ಡೌನ್ ವೇಳೆ ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಬಸ್ಸು, ಟ್ಯಾಕ್ಸಿ ಸೇರಿದಂತೆ ಎಲ್ಲಾ ಸೇವೆಗಳು ಬಂದ್ ಆಗಲಿವೆ. ಈ ನಡುವೆ ಸರಕಾರಿ ನೌಕರರಲ್ಲೂ ಸೋಂಕು ಪತ್ತೆಯಾಗುತ್ತಿರುವುದರಿಂದ ಕೆಲಸದ ಅವಧಿಯನ್ನು ಕಡಿಮೆಗೊಳಿಸಲಾಗಿದೆ. ಮುಂದಿನ ವಾರದಿಂದ ವಾರದಲ್ಲಿ ಐದು ದಿನಗಳ ಕಾಲ ಮಾತ್ರವೇ ಸರಕಾರಿ ಕಚೇರಿಗಳು ಕರ್ತವ್ಯ ನಿರ್ವಹಿಸಲಿವೆ.