ಗುನಾ, ಜೂ. 28 (DaijiworldNews/MB) : ತನ್ನ ಅಪ್ರಾಪ್ತ ಪ್ರೇಯಸಿಯನ್ನು ಕರೆದೊಯ್ದು ವಿವಾಹವಾದ ಆರೋಪದ ಮೇಲೆ 20 ವರ್ಷದ ಯುವತಿಯನ್ನು ಬಂಧನ ಮಾಡಿರುವ ಘಟನೆ ಮಧ್ಯಪ್ರದೇಶದ ಗುನಾ ಪಟ್ಟಣದಲ್ಲಿ ಶನಿವಾರ ನಡೆದಿದೆ.
ಬುಧೆ ಬಾಲಾಜಿ ಪ್ರದೇಶದ ನಿವಾಸಿ ತನ್ನ 17 ವರ್ಷದ ಮಗಳು ನಾಪತ್ತೆಯಾಗಿದ್ದಾಳೆ ಎಂದು ಸೋಮವಾರ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ತನಿಖೆ ನಡೆಸಿದಾಗ ಅವರ ಸಂಬಂಧಿ ಶಿವಪುರಿ ಜಿಲ್ಲೆಯ ಹಳ್ಳಿಯ ಯುವತಿಯು ಕೂಡಾ ನಾಪತ್ತೆಯಾಗಿರುವ ವಿಷಯ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ಈ ಹಳ್ಳಿಗೆ ಪೊಲೀಸರ ತಂಡ ತೆರಳಿದಾಗ ಈ ಇಬ್ಬರು ಸಲಿಂಗಿಗಳು ವಿವಾಹವಾಗಿರುವುದು ತಿಳಿದು ಬಂದಿದ್ದು ಈ ಅಪ್ರಾಪ್ತ ಬಾಲಕಿಯು ತಾನು ಸ್ವಂತ ಇಚ್ಛೆಯಿಂದ ಓಡಿಹೋಗಿ ವಿವಾಹವಾಗಿದ್ಧೇನೆ ಎಂದು ಹೇಳಿಕೊಂಡಿದ್ದಾಳೆ.
ಆದರೆ ಬಾಲಕಿ ಅಪ್ರಾಪ್ತೆಯಾದ ಕಾರಣದಿಂದ ಭಾರತೀಯ ದಂಡ ಸಂಹಿತೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೊಕ್ಸೊ) ಕಾಯ್ದೆಯಡಿಯಲ್ಲಿ ಯುವತಿಯನ್ನು ಬಂಧಿಸಲಾಗಿದ್ದು ಬಾಲಕಿಯೊಂದಿಗೆ ಸಮಾಲೋಚನೆ ನಡೆಸಿ ಆಕೆಯ ಮನೆಗೆ ವಾಪಾಸ್ ಕಳುಹಿಸಲಾಗಿದೆ.