ನವದೆಹಲಿ, ಜೂ. 28 (DaijiworldNews/MB) : ಪೂರ್ವ ಲಡಾಕ್ನಲ್ಲಿ ಭಾರತದ ಭೂಪ್ರದೇಶದ ಮೇಲೆ ಕಣ್ಣಿಟ್ಟವರಿಗೆ ಭಾರತದ ಸೇನೆ ತಕ್ಕ ಉತ್ತರವನ್ನು ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ತಿಳಿಸಿದ್ದಾರೆ.
ಈ ತಿಂಗಳ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಡಿ ಮತ್ತು ಶಾಂತಿ ರಕ್ಷಣೆಯ ವಿಚಾರದಲ್ಲಿ ಭಾರತಕ್ಕೆ ಇರುವ ಬದ್ಧತೆಯನ್ನು ವಿಶ್ವವೇ ತಿಳಿದಿದ್ದು ಹಲವು ಸವಾಲುಗಳ ನಡುವೆ ನಾವೀಗ ನೆರೆ ದೇಶದ ಕಿರುಕುಳದ ವಿರುದ್ಧದ ಹೋರಾಟವನ್ನು ನಡೆಸಬೇಕಿದೆ. ಈಗಾಗಲೇ ದೇಶವು ಕೊರೊನಾ ಲಾಕ್ಡೌನ್, ಆಂಫಾನ್ ಚಂಡಮಾರುತ, ನಿಸರ್ಗ ಚಂಡಮಾರುತ, ಮಿಡತೆ ದಾಳಿ, ಭೂಕಂಪ ಮೊದಲಾದ ಸವಾಲುಗಳನ್ನು ನಮ್ಮ ದೇಶ ಎದುರಿಸಿದೆ. ಈಗ ಗಡಿ ವಿಚಾರದಲ್ಲಿ ಚೀನಾ ತಕರಾರು ಎತ್ತಿದ ಬಳಿಕ ಹಲವು ಮಂದಿ ಸ್ವದೇಶಿ ಉತ್ಪನ್ನಗಳನ್ನು ಬಳಸುವತ್ತ ಗಮನ ಹರಿಸಿದ್ದಾರೆ. ಹಲವರು ಸ್ವದೇಶಿ ವಸ್ತು ಬಳಕೆಗೆ ಕರೆ ನೀಡಿದ್ದಾರೆ. ಸ್ವಾವಲಂಬಿಯಾಗುವ ನಿಟ್ಟಿನಲ್ಲಿ ಭಾರತೀಯರ ಈ ನಿರ್ಧಾರ ಮೆಚ್ಚುವಂತದ್ದು ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಜೂನ್ 15ರಂದು ಲಡಾಖ್ನಲ್ಲಿ ಹುತಾತ್ಮರಾದ 20 ಮಂದಿ ಯೋಧರಿಗೆ ಭಾರತವೇ ಗೌರವ ಸಲ್ಲಿಸುತ್ತಿದ್ದು ದೇಶ ಎಂದಿಗೂ ಅವರ ತ್ಯಾಗ ಬಲಿದಾನ ಮರೆಯದು. ಈ ಯುದ್ಧದಲ್ಲಿ ತಮ್ಮ ಮಕ್ಕಳನ್ನು ಕಳೆದುಕೊಂಡ ಪೋಷಕರು ಇನ್ನೂ ಕೂಡಾ ಸೈನ್ಯಕ್ಕೆ ತಮ್ಮ ಮಕ್ಕಳನ್ನು ಕಳುಹಿಸುವಲ್ಲಿ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ. ಬಿಹಾರದ ಕುಂದನ್ ಕುಮಾರ್ ಎಂಬ ಹುತಾತ್ಮ ಯೋಧನ ತಂದೆ ತನ್ನ ಮೊಮ್ಮಗನನ್ನು ಕೂಡಾ ಸೇನೆಗೆ ಕಳುಹಿಸುವುದಾಗಿ ಹೇಳಿದ್ದು ಇಂಥಹ ಕುಟುಂಬದ ತ್ಯಾಗ ಮನೋಭಾವ ಮೆಚ್ಚುವಂತದ್ದು ಎಂದು ಶ್ಲಾಘಿಸಿದ್ದಾರೆ.
2020 ರಲ್ಲಿ ಹಲವು ಸಮಸ್ಯೆಗಳು ಬಂದಿದ್ದು ಎಲ್ಲರಿಗೂ ಈ ವರ್ಷ ಸರಿಯಿಲ್ಲ ಎಂದನಿಸುತ್ತಿದೆ. ಆದರೆ ನಾವು ಹಾಗೆ ಭಾವಿಸಬಾರದು ಎಲ್ಲ ರೀತಿಯ ಅಪಾಯಗಳನ್ನು ಎದುರಿಸಿ ಗಟ್ಟಿಯಾಗಿ ನಿಲ್ಲುವುದು ಭಾರತದ ಇತಿಹಾಸವಾಗಿದ್ದು ನನಗೆ ದೇಶದ 13 ಕೋಟಿ ಜನರ ಮೇಲೆ ಅಚಲ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.