ನವದೆಹಲಿ, ಜೂ. 28 (DaijiworldNews/MB) : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ ಸೋಂಕು ಸಮುದಾಯದ ಹಂತ ತಲುಪಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
ಸುದ್ಧಿ ಸಂಸ್ಥೆಯೊಂದರ ಸಂದರ್ಶನದಲ್ಲಿ ಮಾತನಾಡಿದ ಅವರು, ಜುಲೈ 31ರ ವೇಳೆಗೆ ದೆಹಲಿಯಲ್ಲಿ ಕೊರೊನಾ ಸೋಂಕು 5.50 ಲಕ್ಷಕ್ಕೆ ಏರಿಕೆಯಾಗಬಹುದು ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಹೇಳಿಕೆ ನೀಡುವ ಮುಖಾಂತರ ಜನರಲ್ಲಿ ಆತಂಕ ಸೃಷ್ಟಿಸಿದ್ದಾರೆ. ಸೋಂಕಿತರ ಚಿಕಿತ್ಸೆಗೆ ಸೌಲಭ್ಯದ ಕೊರತೆ ಉಂಟಾಗಿದ್ದು ಪರಿಸ್ಥಿತಿ ಹದಗೆಟ್ಟಿದೆ ಎಂದು ಹೇಳಿದ್ದರು. ಅವರು ಅಂದಾಜಿಸಿರುವ ಸಂಖ್ಯೆ ಸರಿಯೋ ತಪ್ಪೋ ಎಂಬ ವಿಚಾರವಾಗಿ ನಾನು ಮಾತನಾಡುವುದಿಲ್ಲ. ಆದರೆ ಜನರಲ್ಲಿ ತೀವ್ರವಾದ ಆತಂಕ ಸೃಷ್ಟಿ ಮಾಡಿದ್ದಾರೆ. ಇದರಿಂದಾಗಿ ಕೆಲವರು ದೆಹಲಿ ಬಿಟ್ಟು ಬೇರೆ ಕಡೆ ಹೋಗುತ್ತಿದ್ದಾರೆ. ಆದರೆ ದೆಹಲಿ ಅವರು ಹೇಳಿದಷ್ಟು ತೀರಾ ಹದಗೆಟ್ಟಿಲ್ಲ ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಹಾಗೂ ದೆಹಲಿ ಸರ್ಕಾರ ಜೊತೆಯಾಗಿ ಕಾರ್ಯ ನಿರ್ವಹಿಸುತ್ತಿದೆ. ಸಮನ್ವಯ ಹೆಚ್ಚಿಸುವ ನಿಟ್ಟಿನಲ್ಲಿ ಸಭೆಗಳನ್ನು ಕೂಡಾ ನಡೆಸಲಾಗಿದೆ. ದೆಹಲಿ ಸರ್ಕಾರಕ್ಕೆ ಸಹಾಯ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿಯವರು ಗೃಹ ಸಚಿವಾಲಯಕ್ಕೆ ಸೂಚನೆ ನೀಡಿದ್ದಾರೆ. ಕೇಂದ್ರ ಸರ್ಕಾರ ಎಂದಿಗೂ ದೆಹಲಿ ಸರ್ಕಾರದ ಜೊತೆಗಿದೆ ಎಂದು ಭರವಸೆ ನೀಡಿದರು.
ದೆಹಲಿಯಲ್ಲಿ ಕೊರೊನಾ ಸಮುದಾಯ ಹಂತ ತಲುಪಿಲ್ಲ. ಈ ವಿಚಾರದಲ್ಲಿ ಜನರಿಗೆ ಯಾವುದೇ ಆತಂಕ ಬೇಡ. ಸಮುದಾಯ ಹಂತ ತಲುಪಿದ್ದಲ್ಲಿ ಕೇಂದ್ರ ಸರ್ಕಾರ ಅದನ್ನು ಘೋಷಿಸಲು ಹಿಂಜರಿಯುವುದಿಲ್ಲ ಎಂದು ಮಾಧ್ಯಮ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.
ಇನ್ನು ದೆಹಲಿಯಲ್ಲಿ ಅಲ್ಲಿನ ನಿವಾಸಿಗಳಿಗೆ ಮಾತ್ರ ಕೋವಿಡ್ ಬೆಡ್ ಮೀಸಲು ಎಂಬ ದೆಹಲಿ ಸರ್ಕಾರದ ತೀರ್ಮಾನವನ್ನು ತೀವ್ರವಾಗಿ ಟೀಕೆ ಮಾಡಿದ ಅವರು, ನಾನು ಕೂಡಾ ಬೇರೆ ರಾಜ್ಯದವನು. ನನಗೆ ಏನಾದರೂ ಆದಲ್ಲಿ ನಾನು ತುರ್ತಾಗಿ ಎಲ್ಲಿಗೆ ಹೋಗುವುದು. ದೆಹಲಿ ಈ ರಾಷ್ಟ್ರದ ರಾಜಧಾನಿ. ಇಲ್ಲಿ ಹಲವರು ಬರುತ್ತಾರೆ. ಅವರಿಗೆ ಕೊರೊನಾ ದೃಢಪಟ್ಟರೆ ಅವರು ಎಲ್ಲಿ ಚಿಕಿತ್ಸೆ ಪಡೆಯುವುದು ಎಂದು ದೆಹಲಿ ಸರ್ಕಾರವನ್ನು ಪ್ರಶ್ನಿಸಿದರು.