ಮುಂಬೈ, ಜೂ 28(DaijiworldNews/PY) : ಕೊರೊನಾ ಹಿನ್ನೆಲೆ ಮುಂಬರುವ ಗಣೇಶೋತ್ಸವದಲ್ಲಿ ಜನಸಂದಣಿಗೆ ಅವಕಾಶ ನೀಡಬಾರದು. 4 ಅಡಿಗಳಿಗಿಂತ ಎತ್ತರದ ವಿಗ್ರಹಗಳನ್ನು ಗಣೇಶ ಮಂಡಳಿಗಳು ಸ್ಥಾಪನೆ ಮಾಡಬಾರದು ಎಂದು ಸಿಎಂ ಉದ್ದವ್ ಠಾಕ್ರೆ ಹೇಳಿದ್ದಾರೆ.
ಈಗಾಗಲೇ ನಾನು ಗಣೇಶ ಮಂಡಳಿಗಳ ಜೊತೆ ಮಾತುಕತೆ ಮಾಡಿದ್ದೇನೆ. ಜನಸಂದಣಿಯನ್ನು ತಪ್ಪಿಸುವ ನಿಟ್ಟಿನಲ್ಲಿ ಎಲ್ಲಾ ಪೂಜಾ ಕೇಂದ್ರಗಳು ಮುಚ್ಚಲ್ಪಟ್ಟಿವೆ. ಮಂಡಳಿಗಳು ಸರ್ವಾನುಮತದಿಂದ ಶಿಸ್ತು ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ತೆಗೆದುಕೊಳ್ಳುವ ವಿಚಾರವಾಗಿ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.
ದೊಡ್ಡ ವಿಗ್ರಹಗಳಿಗೆ ಅಧಿಕ ಸ್ವಯಂಸೇವಕರ ಅವಶ್ಯಕತೆ ಇರುವ ಕಾರಣ ಗಣೇಶನ ವಿಗ್ರಹಗಳು ನಾಲ್ಕು ಅಡಿ ಎತ್ತರ ಇರಬಾರದು. ಇದರೊಂದಿಗೆ ಮುಂಬರುವ ಕೃಷ್ಣಜನ್ಮಾಷ್ಟಮಿಯ ಬಗ್ಗೆ ಮಾತನಾಡಿದ ಅವರು, ಕೃಷ್ಣಜನ್ಮಾಷ್ಟಮಿಯ ದಹಿಹಂಡಿ ಆಚರಣೆಯನ್ನು ರದ್ದುಮಾಡಲಾಗಿದೆ. ಈ ಆಚರಣೆಯನ್ನು ದೊಡ್ಡ ಮಟ್ಟದಲ್ಲಿ ಆಯೋಜನೆ ಮಾಡುವ ಶಿವಸೇನೆ ಶಾಸಕ ಪ್ರತಾಪ್ ಸರ್ ನಾಯಕ್ ಅವರು ಒಂದು ಕೋಟಿ.ರೂ. ಅನ್ನು ಕೊರೊನಾ ಪರಿಹಾರ ನಿಧಿಗೆ ನೀಡಿದ್ದಾರೆ ಎಂದರು.