ನವದೆಹಲಿ, ಜೂ. 29 (DaijiworldNews/MB) : ರಾಜೀವ್ ಗಾಂಧಿ ಪೌಂಡೇಶನ್ಗೆ ಕಾಂಗ್ರೆಸ್ ಚೀನಾದಿಂದ ಹಣ ಪಡೆದಿದೆ ಎಂಬ ವಿಷಯವನ್ನು ಹೇಳುತ್ತಿರುವ ಬಿಜೆಪಿಗೆ ಕಾಂಗ್ರೆಸ್ ತಿರುಗೇಟು ನೀಡಿದ್ದು ಭಾರತ ಚೀನಾದ ನಡುವೆ ಈ ಗಡಿಯಲ್ಲಿ ಸಂಘರ್ಷ ನಡೆಯುತ್ತಿರುವ ಈ ಸಂದರ್ಭದಲ್ಲಿ ಚೀನಾದ ಸಂಸ್ಥೆಗಳಿಂದ ಪಿಎಂ ಕೇರ್ಸ್ ನಿಧಿಗೆ ದೇಣಿಗೆಯನ್ನು ಯಾಕಾಗಿ ಸ್ವೀಕಾರ ಮಾಡಲಾಗಿದೆ. ಪಿಎಂ ಕೇರ್ಸ್ಗೆ ಚೀನಾದಿಂದ ದೇಣಿಗೆ ಪಡೆದ ಮೋದಿ ದೇಶವನ್ನು ರಕ್ಷಿಸುವರೇ? ಎಂದು ಪ್ರಶ್ನಿಸಿದೆ.
ಈ ಬಗ್ಗೆ ವಿಡಿಯೋ ಕಾನ್ಫೆರೆನ್ಸ್ ಮೂಲಕ ಪತ್ರಿಕಾಗೋಷ್ಠಿ ನಡೆಸಿರುವ ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಗ್ವಿ ಅವರು, ಇತ್ತ ಗಡಿಯಲ್ಲಿ ಪ್ರಕ್ಷುಬ್ಧ ಸ್ಥಿತಿ ನಿರ್ಮಾಣವಾಗಿರುವಾಗ ಅತ್ತ ಪ್ರಧಾನಿ ಮೋದಿಯವರು ಚೀನಾದ ಸಂಸ್ಥೆಯಿಂದ ಪಿಎಂ ಕೇರ್ಸ್ಗೆ ದೇಣಿಗೆ ಪಡೆದಿದ್ದಾರೆ. ಇದು ರಾಷ್ಟ್ರದ ಭದ್ರತೆಯ ದೃಷ್ಟಿಯಿಂದ ಬಹಳ ಆಘಾತಕಾರಿ ಬೆಳವಣಿಗೆಯಾಗಿದೆ. ವಿವಾದಾತ್ಮಕವಾದ ಹಾಗೂ ಪಾರದರ್ಶಕವಾಗಿರದೆಯೇ ಚೀನಾದ ಸಂಸ್ಥೆಗಳಿಂದ ನೂರಾರು ಕೋಟಿ ರೂಪಾಯಿಗಳನ್ನು ದೇಣಿಗೆಯಾಗಿ ಪಡೆದಿರುವ ಮೋದಿಯವರು ಈ ದೇಶವನ್ನು ಚೀನಾದ ಆಕ್ರಮಣದಿಂದ ರಕ್ಷಿಸುತ್ತಾರೆಯೇ ಎಂದು ಉತ್ತರಿಸಬೇಕು. ಚೀನಾವನ್ನು ಆಕ್ರಮಣಕಾರಿ ಎಂದು ಇನ್ನೂ ಯಾಕಾಗಿ ಕರೆದಿಲ್ಲ ಎಂಬುದಕ್ಕೂ ಉತ್ತರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಕೊರೊನಾದ ವಿರುದ್ಧದ ಹೋರಾಟಕ್ಕಾಗಿ ಮಾರ್ಚ್ನಲ್ಲಿ ಪಿಎಂ ಕೇರ್ಸ್ ಸ್ಥಾಪಿಸಲಾಗಿದ್ದು ಈ ನಿಧಿಗೆ ಬರುವ ದೇಣಿಗೆಯ ಬಗ್ಗೆ ಸಾರ್ವಜನಿಕವಾಗಿ ತಿಳಿಸಬೇಕು. ವೆಬ್ಸೈಟ್ ಮೂಲಕ ಮಾಹಿತಿ ನೀಡಿ ಪಾರದರ್ಶಕತೆ ಕಾಪಾಡಿಕೊಳ್ಳಬೇಕು ಎಂದು ಕಾಂಗ್ರೆಸ್ನ ಒತ್ತಾಯವಾಗಿದೆ. ಏತನ್ಮಧ್ಯೆ ಆರ್ಟಿಐ ಕಾರ್ಯಕರ್ತರು ಪಿಎಂ ಕೇರ್ಸ್ನ ವಿವರಗಳನ್ನು ನೀಡಲು ಅರ್ಜಿ ಸಲ್ಲಿಸಿದ್ದು ಕೇಂದ್ರ ಸರ್ಕಾರ ಪಿಎಂ ಕೇರ್ಸ್ ಆರ್ಟಿಐ ವ್ಯಾಪ್ತಿಗೆ ಬರುವುದಿಲ್ಲ ಎಂದು ಉತ್ತರಿಸಿದೆ.
ಇನ್ನು ಸಿಂಗ್ವಿ ಅವರು, ಚೀನಾದಿಂದ ಪ್ರಧಾನಿ ಮೋದಿ ಪಿಎಂ ಕೇರ್ಸ್ಗೆ ದೇಣಿಗೆ ಪಡೆದಿದ್ದಾರೆ ಎಂದು ಆರೋಪಿಸುತ್ತಾ ಕಳೆದ ಆರು ವರ್ಷಗಳಲ್ಲಿ ಪ್ರಧಾನಿ ಮೋದಿಯವರು ಚೀನಾದ ಅಧ್ಯಕ್ಷ ಷಿ ಜಿನ್ಪಿಂಗ್ ಅವರೊಂದಿಗೆ 18 ಸಭೆಗಳನ್ನು ನಡೆಸಿದ್ದಾರೆ ಎಂಬುದನ್ನು ಕೂಡಾ ಉಲ್ಲೇಖಿಸಿ ಟೀಕಿಸಿದ್ದಾರೆ.
ಇನ್ನು ಕಾಂಗ್ರೆಸ್ ಕೇಂದ್ರ ಸರ್ಕಾರದ ಮೇಲೆ ಮಾಡಿರುವ ಆರೋಪಗಳಿಗೆ ಈವರೆಗೆ ಕೇಂದ್ರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.