ಚಿಕ್ಕಬಳ್ಳಾಪುರ, ಜೂ 29 (Daijiworld News/MSP): ದ್ವಿತೀಯ ಪಿಯುಸಿ ಹಾಗೂ ಎಸೆಸೆಲ್ಸಿ ಪರೀಕ್ಷೆ ಫಲಿತಾಂಶದ ಕುರಿತಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿಯೊಂದನ್ನು ನೀಡಿದ್ದುಆಗಸ್ಟ್ ಮೊದಲ ವಾರದಲ್ಲಿಎಸೆಸೆಲ್ಸಿ ಹಾಗೂ ಜುಲೈ ಅಂತ್ಯದ ವೇಳೆಗೆ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಳ್ಳಲಿದೆ ಎಂದು ಹೇಳಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಸೋಮವಾರ ಎಸೆಸೆಲ್ಸಿ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಸಚಿವರು,ಕಳೆದ ವರ್ಷಕ್ಕೆ ಹೋಲಿಸಿದರೆ ಹಾಗೂ ಕೊರೊನಾ ಸಾಂಕ್ರಮಿಕ ರೋಗದ ಸಮಯದ ದೃಷ್ಟಿಕೋನದಿಂದ ವಿದ್ಯಾರ್ಥಿಗಳ ಗೈರು ಹಾಜರಿಯಲ್ಲಿ ದೊಡ್ಡ ಪ್ರಮಾಣದಲ್ಲಿ ವ್ಯತ್ಯಾಸ ಆಗಿಲ್ಲ. ಪರೀಕ್ಷೆಗಳು ಸುಸೂತ್ರವಾಗಿ ನಡೆಯುತ್ತಿದೆ. ಉತ್ಸಾಹದಿಂದಲೇ ಪರೀಕ್ಷೆ ಬರೆಯುತ್ತಿದ್ದಾರೆ. ರಾಜ್ಯದಲ್ಲಿ ಕೊವೀಡ್ ಸೋಂಕು ಹೊಂದಿರುವ ೨೫ ವಿದ್ಯಾರ್ಥಿಗಳನ್ನು ಗುರುತಿಸಲಾಗಿದ್ದು, ಅವರಿಗೆ ಪರೀಕ್ಷೆಯಿಂದ ವಿನಾಯಿತಿ ನೀಡಲಾಗಿದೆ.
ಆಗಸ್ಟ್ ಮೊದಲ ವಾರದಲ್ಲಿಹತ್ತನೇ ತರಗತಿಯ ಹಾಗೂ ಜುಲೈ ಅಂತ್ಯದ ವೇಳೆಗೆ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಳ್ಳಲಿದೆ ಎಂದರು.
ಇನ್ನು ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ರಾಜ್ಯದಲ್ಲಿ ಆನ್ ಲೈನ್ ಶಿಕ್ಷಣ ಪದ್ಧತಿ ಜಾರಿಗೆ ತರಲಾಗುವುದು. ಅದಕ್ಕೂ ಮೊದಲು ರಾಜ್ಯದ ಹಿನ್ನಲೆ ಗಮನದಲ್ಲಿ ಇಟ್ಟುಕೊಂಡು ಜೊತೆಗೆ ತಜ್ಞರ ಅಭಿಪ್ರಾಯ ಪಡೆದ ನಂತರ ಯಾವ ರೀತಿಯಲ್ಲಿ ಆನ್ ಲೈನ್ ಶಿಕ್ಷಣ ಜಾರಿಗೆ ತರಬೇಕು ಎಂಬುದನ್ನು ನಿರ್ಧರಿಸುತ್ತೇವೆ ಎಂದರು.