ಬೆಂಗಳೂರು, ಜೂ. 29 (DaijiworldNews/MB) : ಈ ಸಂದರ್ಭದಲ್ಲಿ ನನ್ನ ಪ್ರಕಾರವಾಗಿ ಪೆಟ್ರೋಲ್ಗೆ 25 ರೂ ಮಾಡಬೇಕಾಗಿತ್ತು. ಆದರೆ ಸತತವಾಗಿ ಪೆಟ್ರೋಲ್ ಡಿಸೇಲ್ ದರ ಏರಿಕೆ ಮಾಡಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಸತತವಾಗಿ ತೈಲ ಬೆಲೆ ಏರಿಕೆ ಮಾಡುತ್ತಿರುವ ಕೇಂದ್ರ ಸರ್ಕಾರದ ನೀತಿಯನ್ನು ವಿರೋಧ ಮಾಡಿ ಕಾಂಗ್ರೆಸ್ನಿಂದ ಇಂದು ಸೈಕಲ್ ಸವಾರಿ ಮಾಡುವ ಮೂಲಕ ಪ್ರತಿಭಟನೆ ನಡೆದಿದ್ದು, ಇದಕ್ಕೂ ಮೊದಲು ಮಾತನಾಡಿದ ಸಿದ್ದರಾಮಯ್ಯನವರು, ಅಂತಾರಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಕಡಿಮೆಯಾಗಿದ್ದು ಬ್ಯಾರಲ್ಗೆ 130 ರೂ ಡಾಲರ್ ಇದೆ. ಆದರೆ ಇಲ್ಲಿ ಮಾತ್ರ ಪೆಟ್ರೋಲ್ ಡಿಸೇಲ್ ದರ ಏರಿಕೆ ಮಾಡಲಾಗುತ್ತಿದೆ. ಕೊರೊನಾ ಸೋಂಕಿನಿಂದ ಜನರು ಸಂಕಷ್ಟದಲ್ಲಿದ್ದರು ಕೂಡಾ ಸತತವಾಗಿ ಕಳೆದ 10 ದಿನಗಳಿಂದ 11 ರೂ ಏರಿಸಿ ಮೋದಿ ಸರ್ಕಾರ ಬಡವರ ಮೇಲೆ ಬರೆ ಎಳೆದಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಸಬ್ಸಿಡಿ ನೀಡಲಾಗಿದೆ. ಆದರೆ ಈಗ ಇರುವ ಮೋದಿ ಸರ್ಕಾರ ಯಾವುದನ್ನೂ ನೀಡಿಲ್ಲ. ಬದಲಾಗಿ ಬೆಲೆ ಏರಿಕೆ ಮಾಡಿ ಜನರ ಮೇಲೆ ಭಾರ ಹೊರಿಸುತ್ತಿದೆ. ರೈತರಿಗೆ ಕೃಷಿ ಹಾಗೂ ಕೈಗಾರಿಕೆಗಳಿಗೆ ಸಂಕಷ್ಟ ಎದುರಾಗಿದೆ. ಇದರಿಂದಾಗಿ ನಾವು ಕೇಂದ್ರ ಸರ್ಕಾರದ ಕಚೇರಿ ಮುಂದೆ ಪ್ರತಿಭಟನೆ ಮಾಡುತ್ತೇವೆ. ಮುಂದೆ ಕೊರೊನಾ ನಿಯಂತ್ರಣದಲ್ಲಿ ಸರ್ಕಾರ ವಿಫಲವಾಗಿರುವುದರ ಬಗೆಯೂ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇನ್ನು ಸೈಕಲ್ ರ್ಯಾಲಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್, ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್, ಅನೇಕ ಶಾಸಕರು ಹಾಗೂ ಕಾರ್ಯಕರ್ತರು ಭಾಗವಹಿಸಿದರು.