ಜಮ್ಮು, ಜೂ 29 (Daijiworld News/MSP): ಕಳೆದ ಮೂವತ್ತು ವರ್ಷಗಳಿಂದ ಕಾಶ್ಮೀರ ಪ್ರತ್ಯೇಕತಾವಾದಿಗಳ ಮುಖಂಡ ಎಂದು ಗುರುಸಿಕೊಂಡಿದ್ದ ಸಯೀದ್ ಅಲಿ ಗಿಲಾನಿ ದಿಡೀರ್ ಬೆಳವಣಿಗೆಯೊಂದರಲ್ಲಿ ಪ್ರತ್ಯೇಕತಾವಾದಿಗಳ ಸಂಘಟನೆಯಾದ ಹುರಿಯತ್ ಕಾನ್ಫರೆನ್ಸ್ ಗೆ ರಾಜೀನಾಮೆ ನೀಡಿದ್ದಾರೆ.
90 ವರ್ಷದ ಗಿಲಾನಿ ಸಂಘಟನೆಯಲ್ಲಿನ ಕೆಲ ಪ್ರಸಕ್ತ ಸನ್ನಿವೇಶಗಳಿಂದಾಗಿ ತಾವು ಆಲ್ ಪಾರ್ಟಿ ಹುರಿಯತ್ ಕಾನ್ಫರೆನ್ಸ್ ಗೆ ರಾಜೀನಾಮೆ ನೀಡುತ್ತಿರುವುದಾಗಿ ಧ್ವನಿ ಸಂದೇಶದಲ್ಲಿ ತಿಳಿಸಿದ್ದು, ಇದರೊಂದಿಗೆ ಎರಡು ಪುಟಗಳ ಪತ್ರವನ್ನೂ ಪ್ರಕಟಿಸಿದ್ದಾರೆ.ಗಿಲಾನಿ ಪಾಕಿಸ್ತಾನದ ಪರವಾದ ನಿಲುವುಗಳನ್ನು ಹೊಂದಿರುವ ಪ್ರತ್ಯೇಕತಾವಾದಿಯಾಗಿದ್ದು, ಕಟ್ಟರ್ ಪ್ರತ್ಯೇಕತಾವಾದಿ ಗುಂಪನ್ನು ಗಿಲಾನಿ ಮುನ್ನಡೆಸುತ್ತಿದ್ದರು.
ಜಮ್ಮು- ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರಕಾರ ಕೈಬಿಟ್ಟ ಘಟನೆ ಬಗ್ಗೆ ಗೀಲಾನಿ ಮೌನದ ಬಗ್ಗೆ ಅವರ ವಿರುದ್ಧ ಸಾಕಷ್ಟು ಟೀಕೆಗಳು ಕೇಳಿ ಬಂದಿದ್ದವು. ಸೋಪೋರ್ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಇವರ ಹುರಿಯತ್ ಕಾನ್ಫರೆನ್ಸ್ ನ ನಿರ್ಗಮನದಿಂದಾಗಿ ಈ ಸ್ಥಾನಕ್ಕೆ ಗಿಲಾನಿ ಅವರ ಆಪ್ತ ಮೊಹಮ್ಮದ್ ಅಶ್ರಫ್ ಸೆಹ್ರಾಯ್ ನೇಮಕಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.