ನವದೆಹಲಿ, ಜೂ. 29 (DaijiworldNews/MB) : ಕೊರೊನಾ ರೋಗಿಗಳ ಚಿಕಿತ್ಸೆಗಾಗಿ ನಗರದಲ್ಲಿ ಪ್ಲಾಸ್ಮಾ ಬ್ಯಾಂಕ್ ಪ್ರಾರಂಭ ಮಾಡಲಾಗುತ್ತದೆ. ಇನ್ನೆರಡು ದಿನದಲ್ಲಿ ಆರಂಭ ಮಾಡಲಾಗುತ್ತದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೋಮವಾರ ತಿಳಿಸಿದ್ದಾರೆ.
ಆನ್ಲೈನ್ ಮೂಲಕ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ''ಆಮ್ ಆದ್ಮಿ ಪಕ್ಷವು ಕೊರೊನಾದಿಂದ ಗುಣಮುಖರಾಗಿರುವವರು ಪ್ಲಾಸ್ಮಾವನ್ನು ದಾನ ಮಾಡಿ ಎಂದು ಮನವಿ ಮಾಡಲಿದ್ದು ಇದಕ್ಕೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳಿಗೆ ಉತ್ತರ ನೀಡಲು ಸಹಾಯವಾಣಿಯನ್ನು ಕೂಡಾ ಆರಂಭ ಮಾಡಲಾಗುತ್ತದೆ'' ಎಂದು ತಿಳಿಸಿದ್ದಾರೆ.
ಹಾಗೆಯೇ ''ಈವರೆಗೆ 29 ಕೊರೊನಾ ರೋಗಿಗಳಿಗೆ ಪ್ಲಾಸ್ಮಾ ಚಿಕಿತ್ಸೆ ನೀಡಲಾಗಿದೆ. ಉತ್ತಮ ಫಲಿತಾಂಶ ದೊರೆತಿದೆ'' ಎಂದು ತಿಳಿಸಿದ್ದಾರೆ.
ಇನ್ನು ಈ ಸಂದರ್ಭದಲ್ಲೇ ಭಾನುವಾರ ಕೊರೊನಾ ಸೋಂಕಿನಿಂದ ಮೃತಪಟ್ಟ ಕೊರೊನಾ ಯೋಧ ವೈದ್ಯ ಡಾ. ಅಸೀಮ್ ಗುಪ್ತಾ (52) ಅವರ ಕುಟುಂಬಕ್ಕೆ ಒಂದು ಕೋಟಿ ರೂಪಾಯಿ ಪರಿಹಾರ ಘೋಷಿಸಿದ್ದಾರೆ.