ಲಖನೌ, ಜೂ. 29 (DaijiworldNews/MB) : ''ಗಡಿ ವಿಚಾರದಲ್ಲಿ ಬಹುಜನ ಸಮಾಜವಾದಿ ಪಕ್ಷ (ಬಿಎಸ್ಪಿ) ಬಿಜೆಪಿಯ ಜೊತೆಯಿರಲಿದೆ'' ಎಂದು ಬಿಎಸ್ಪಿ ಪಕ್ಷದ ಮುಖಂಡೆ ಮಾಯಾವತಿ ಸೋಮವಾರ ತಿಳಿಸಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ''ಗಡಿ ವಿಚಾರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪರಸ್ಪರ ಆರೋಪ ಮಾಡುವುದರಲ್ಲೇ ಮಗ್ನವಾಗಿದೆ. ಇದು ದೇಶದ ರಕ್ಷಣೆಯ ದೃಷ್ಟಿಯಿಂದ ಅಪಾಯಕಾರಿ ಹಾಗೂ ಬಹಳ ಆತಂಕಕಾರಿ. ಈ ಗಡಿ ವಿಚಾರದಲ್ಲಿ ಬಿಎಸ್ಪಿ ಪಕ್ಷವು ಬಿಜೆಪಿಯ ಜೊತೆಯಿರಲಿದೆ'' ಎಂದು ಹೇಳಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ''ಒಂದೆಡೆ ಕೊರೊನಾ ಸಂಕಷ್ಟದಲ್ಲಿ ಜನರು ಸಮಸ್ಯೆ ಎದುರುಸುತ್ತಿದ್ದು ಇನ್ನೊಂದೆಡೆ ತೈಲ ಬೆಲೆ ಕೂಡಾ ಜನರ ಮೇಲೆ ಹೊರೆ ಬೀಳುವಂತೆ ಮಾಡಿದೆ. ಈ ನಿಟ್ಟಿನಲ್ಲಿ ಶೀಘ್ರವೇ ಇಂಧನ ಬೆಲೆಯನ್ನು ನಿಯಂತ್ರಣ ಮಾಡಬೇಕು'' ಎಂದು ಅವರು ಒತ್ತಾಯಿಸಿದ್ದಾರೆ.