ವಿಶಾಖಪಟ್ಟಣಂ, ಜೂ 30 (Daijiworld News/MSP): ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಮತ್ತೊಂದು ವಿಷ ಅನಿಲ ಸೋರಿಕೆ ದುರಂತದಲ್ಲಿ ಇಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.
ಸೋಮವಾರ ರಾತ್ರಿ ೧೧. ೩೦ರ ವೇಳೆಗೆ ಈ ಘಟನೆ ನಡೆದಿದ್ದು, ವಿಶಾಖಪಟ್ಟಣಂನ ಪರವಾಡ ಫಾರ್ಮ್ ಸಿಟಿಯಲ್ಲಿರುವ ಸೈನರ್ ಫಾರ್ಮ್ ಕಂಪನಿಯಿಂದ ಮಧ್ಯರಾತ್ರಿ ರಿಯಾಕ್ಟರ್ ನಿಂದ ಬೆಂಜಿನ್ ಲೀಕ್ ವಿಷನಿಲ ಸೋರಿಕೆ ಆಗಿದೆ.
ರಾಸಾಯನಿಕ ಅನಿಲ ಸೋರಿಕೆಯಿಂದಾಗಿ ಅಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಸಾವನ್ನಪ್ಪಿದ್ದು, ನಾಲ್ವರು ಅಸ್ವಸ್ಥರಾಗಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಗ್ಯಾಸ್ ಹೆಚ್ಚಿನ ಪ್ರಮಾಣದಲ್ಲಿ ಹರಡುವುದನ್ನು ತಡೆಹಿಡಿಯಲಾಗಿದೆ ಎಂದು ಪರ್ವಾದ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಉದಯ್ ಕುಮಾರ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಇನ್ನು ಆಂಧ್ರಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಈ ದುರ್ಘಟನೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಕೇಳಿದ್ದಾರೆ. ಘಟನೆ ಸಂಬಂಧ ಕಂಪನಿ ವಿರುದ್ಧ ಪ್ರಕರಣ ದಾಖಲಾಗಿದೆ.