ಹೈದರಾಬಾದ್, ಜೂ 30(DaijiworldNews/PY) : ಅರಣ್ಯದಲ್ಲಿ ಮರವೊಂದಕ್ಕೆ ಒಂಭತ್ತು ತಿಂಗಳ ಗರ್ಭಿಣಿಯೋರ್ವರ ಮೃತದೇಹವನ್ನು ಕಟ್ಟಿಹಾಕಿ ವಾಪಾಸ್ಸಾದ ಅಮಾನವೀಯ ಘಟನೆಯೊಂದು ಆಂಧ್ರಪ್ರದೇಶದ ಕರ್ನೂರ್ ಜಿಲ್ಲೆಯಲ್ಲಿನಡೆದಿದೆ.
ಮೃತಪಟ್ಟ ಗರ್ಭಿಣಿಯನ್ನು ಲಾವಣ್ಯ ಎನ್ನಲಾಗಿದೆ.
ಕರ್ನೂರ್ ಜಿಲ್ಲೆಯ ಬಿ.ನಾಗಿರೆಡ್ಡಿಪಲ್ಲೆ ಗ್ರಾಮದ ಧರ್ಮೇಂದ್ರ ಅವರೊಂದಿಗೆ ಲಾವಣ್ಯ ಅವರ ವಿವಾಹವಾಗಿತ್ತು. ಲಾವಣ್ಯರ ಪತಿ ದೈನದಿಂನ ಕೂಲಿ ಕಾರ್ಮಿಕರಾಗಿದ್ದರು. ಲಾವಣ್ಯ ಒಂಭತ್ತು ತಿಂಗಳ ಗರ್ಭಿಣಿಯಾಗಿದ್ದು, ಹಾಗಾಗಿ ಲಾವಣ್ಯ ಹೆರಿಗೆಗಾಗಿ ತನ್ನ ತವರು ಮನೆಯಾದ ಸಿರಿವೆಲ್ಲಾಗೆ ಹೋಗಿದ್ದರು. ಶುಕ್ರವಾರದಂದು ಲಾವಣ್ಯರನ್ನು ಅವರ ಪೋ಼ಕರು ಹೆರಿಗೆ ನೋವು ಕಾಣಿಸಿಕೊಂಡ ಕಾರಣ ನಂದ್ಯಾಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು, ಆದರೆ, ಲಾವಣ್ಯ ಹೆರಿಗೆಯ ಸಂದರ್ಭದಲ್ಲಾದ ತೊಂದರೆಯಿಂದ ಶನಿವಾರ ಸಾವನ್ನಪ್ಪಿದ್ದಾರೆ.
ಮೃತ ಲಾವಣ್ಯ ಅವರ ಮೃತದೇಹವನ್ನು ಅಂತ್ಯ ಸಂಸ್ಕಾರ ಮಾಡಲು ನಾಗಿರೆಡ್ಡಿಪಲ್ಲೆಗೆ ತೆಗೆದುಕೊಂಡು ಬಂದಿದ್ದು, ಆ ಊರಿನ ಆಚರಣೆಯ ಪ್ರಕಾರ ಅಂತ್ಯ ಸಂಸ್ಕಾರ ಮಾಡಲು ಎಲ್ಲಾ ಸಿದ್ದತೆಯಾಗಿತ್ತು. ಆದರೆ, ಈ ಸಂದರ್ಭ ಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರು ಅಂತ್ಯ ಸಂಸ್ಕಾರ ಮಾಡಲು ಅವಕಾಶ ನೀಡದೇ, ಗ್ರಾಮದಲ್ಲಿ ಗರ್ಭಿಣಿಯ ಅಂತ್ಯ ಸಂಸ್ಕಾರ ಮಾಡಿದರೆ ಒಳ್ಳೆಯದಾಗುವುದಿಲ್ಲ ಎಂದಿದ್ದಾರೆ.
ಅಂತ್ಯ ಸಂಸ್ಕರಾ ಮಾಡಲು ಗ್ರಾಮಸ್ಥರಲ್ಲಿ ಕುಟುಂಬದವರು ಎಷ್ಟೇ ಮನವಿ ಮಾಡಿಕೊಂಡರೂ ಅವರು ಅವಕಾಶ ನೀಡಲಿಲ್ಲ. ಗ್ರಾಮಸ್ಥರು ಅವಕಾಶ ನೀಡದ ಹಿನ್ನೆಲೆ ಕುಂಟುಂಬದವರು ಗರ್ಭಿಣಿಯ ಮೃತದೇಹವನ್ನು ಹತ್ತಿರದ ಅರಣ್ಯದ ಮರವೊಂದಕ್ಕೆ ಕಟ್ಟಿ ಬಂದಿದ್ದಾರೆ. ಮಾರನೇ ದಿನ ನೆರೆಯ ಗ್ರಾಮಸ್ಥರು ಕಟ್ಟಿಗೆ ತರಲೆಂದು ಕಾಡಿಗೆ ಹೋದ ವೇಳೆ ಗರ್ಭಿಣಿಯ ಮೃತದೇಹವನ್ನು ಕಂಡು ರುದ್ರವರಂ ಪೊಲೀಸರಿಗೆ ತಿಳಿಸಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಶೀಲಿಸಿದ್ದಾರೆ.
ವಿಷಯ ತಿಳಿದ ಬಳಿಕ ಮೃತರ ಕುಟುಂಬದವರನ್ನು ಪತ್ತೆ ಮಾಡಿದ್ದೇವೆ. ಘಟನೆಯ ಬಗ್ಗೆ ಗ್ರಾಮಸ್ಥರ ಮನವೊಲಿಸಲು ಪ್ರಯತ್ನ ಮಾಡಿದೆವು ಎಂದು ಸಬ್ ಇನ್ಸ್ ಪೆಕ್ಟರ್ ರಾಮಮೋಹನ್ ರೆಡ್ಡಿ ತಿಳಿಸಿದರು.
ಪೊಲೀಸರೇ ಕೊನೆಗೆ ಲಾವಣ್ಯ ಅವರ ಮೃತದೇಹವನ್ನು ಅಂತ್ಯ ಸಂಸ್ಕಾರ ಮಾಡಿದ್ದಾರೆ. ಘಟನೆಯ ಬಗ್ಗೆ ಪೊಲೀಸರು 15 ಜನರ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.