ನವದೆಹಲಿ, ಜೂ 30(DaijiworldNews/PY) : ಕೇಂದ್ರವು ಭಾರತದಲ್ಲಿ 59 ಚೀನೀ ಆ್ಯಪ್ಗಳನ್ನು ನಿಷೇಧಿಸುವ ಆದೇಶ ಹೊರಡಿಸಿದ್ದು, ಚೀನಾದ 5ಜಿ ಉಪಕರಣಗಳನ್ನು ಕೂಡಾ ನಿರ್ಬಂಧಿಸಲು ಮುಂದಾಗಿದೆ.
ಈ ಬಗ್ಗೆ ಸಚಿವರ ಉನ್ನತ ಮಟ್ಟದ ಸಭೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಭಾರತದಲ್ಲಿ ತರಂಗಾಂತರಗಳ ಹರಾಜು ಪ್ರಕ್ರಿಯೆ ನಡೆಯದ ಕಾರಣ ಭಾರತದಲ್ಲಿ ಕನಿಷ್ಠ ಪಕ್ಷ ಒಂದು ವರ್ಷವಾದರೂ 5ಜಿ ಅನುಷ್ಠಾನ ವಿಳಂಬವಾಗಲಿದೆ. ಅಲ್ಲದೇ, ತರಂಗಾಂತರಗಳನ್ನು ಖರೀದಿ ಮಾಡಲು ಪೈಪೋಟಿ ಮಾಡಬೇಕಾದ ವೊಡಾಫೋನ್ ಹಾಗೂ ಐಡಿಯಾ ಸೇರಿದಂತೆ ಹಲವು ದೂರಸಂಪರ್ಕ ಕಂಪೆನಿಗಳು ಈಗ ಆರ್ಥಿಕ ಸಂಕಷ್ಟಕ್ಕೊಳಗಾಗಿವೆ.
ಚೀನಾದ ಹುವೈ ಹಾಗೂ ಇತರ ಕಂಪೆನಿಗಳು 5ಜಿ ಅನುಷ್ಠಾನಗೊಳಿಸಲು ವಿವಿಧ ಉಪಕರಣಗಳನ್ನು ಪೂರೈಕೆ ಮಾಡುವಲ್ಲಿ ಮುಂದೆ ಇವೆ. ಹಾಗಾಗಿ ಈ ಕಂಪೆನಿಗಳ ಉಪಕರಣಗಳಿಗೆ ನಿಷೇಧ ಹೇರಲು ಮಾತುಕತೆ ಮಾಡಲಾಗಿದೆ.
ಈಗಾಗಲೇ ಅಮೆರಿಕ, ಹುವೈ ಕಂಪೆನಿಯ ಮುಖ್ಯಸ್ಥ ಪಿಎಲ್ಎನೊಂದಿಗೆ ನಂಟು ಹೊಂದಿರುವ ಆರೋಪದ ಮೇರೆಗೆ ನಿರ್ಬಂಧ ಹೇರಿದೆ.