ಬೆಂಗಳೂರು, ಜೂ 30(DaijiworldNews/PY): ಕೊರೊನಾ ಚಿಕಿತ್ಸೆ ಬಗ್ಗೆ ವ್ಯಾಪಕ ದೂರುಗಳ ಹಿನ್ನೆಲೆಯಲ್ಲಿ ಇದರ ಮೇಲೆ ನಿಗಾ ಇಡಲು ಮುಖ್ಯಮಂತ್ರಿಗಳು ಅವರು ತಕ್ಷಣ ಸರ್ವಪಕ್ಷಗಳ ಪರಿಶೀಲನಾ ಸಮಿತಿ ರಚಿಸಬೇಕು. ಇದರಲ್ಲಿ ಪಕ್ಷಗಳಲ್ಲಿರುವ ವೃತ್ತಿನಿರತ ಮತ್ತು ವೈದ್ಯಕೀಯ ಶಿಕ್ಷಣ ಹೊಂದಿರುವ ನಾಯಕರನ್ನು ಸೇರಿಸಿಕೊಳ್ಳಬಹುದು ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಕೊರೊನಾ ಚಿಕಿತ್ಸೆ ಬಗ್ಗೆ ವ್ಯಾಪಕ ದೂರುಗಳ ಹಿನ್ನೆಲೆಯಲ್ಲಿ ಇದರ ಮೇಲೆ ನಿಗಾ ಇಡಲು ಮುಖ್ಯಮಂತ್ರಿಗಳು ಅವರು ತಕ್ಷಣ ಸರ್ವಪಕ್ಷಗಳ ಪರಿಶೀಲನಾ ಸಮಿತಿ ರಚಿಸಬೇಕು. ಪಕ್ಷಗಳಲ್ಲಿರುವ ವೃತ್ತಿನಿರತ ಮತ್ತು ವೈದ್ಯಕೀಯ ಶಿಕ್ಷಣ ಹೊಂದಿರುವ ನಾಯಕರನ್ನು ಇದರಲ್ಲಿ ಸೇರಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.
ಕೊರೊನಾ ಚಿಕಿತ್ಸೆಗೆ ಮೀಸಲಿಟ್ಟಿರುವ ಸರ್ಕಾರಿ ಆಸ್ಪತ್ರೆಗಳ ಬಗ್ಗೆ ನಿರ್ಲಕ್ಷ, ತಾರತಮ್ಯ ನೀತಿ ಮತ್ತು ಭ್ರಷ್ಟಾಚಾರದ ಆರೋಪಗಳಿವೆ. ರಾಜಕೀಯ ಪ್ರಭಾವ ಬಳಸಿ ಬಲವಿದ್ದವರು ಬದುಕಿಕೊಳ್ಳುತ್ತಾರೆ, ಬಡವರಿಗೆ ದಿಕ್ಕಿಲ್ಲದಂತಹ ಸ್ಥಿತಿ. ಸಿಎಂ ಅವರೇ ಈ ಕಡೆಗಮನ ಹರಿಸಿ ಎಂದಿದ್ದಾರೆ.
ರೋಗಿಗಳಿಗೆ ತಾನು ಪಡೆಯುತ್ತಿರುವ ಚಿಕಿತ್ಸೆಯ ಸಂಪೂರ್ಣ ವಿವರ ಪಡೆಯುವ ಕಾನೂನುಬದ್ದ ಹಕ್ಕಿದೆ. ಸೋಂಕಿತರಿಗೆ ನೀಡುತ್ತಿರುವ ಔಷಧಿ, ಅನುಸರಿಸುತ್ತಿರುವ ಚಿಕಿತ್ಸಾ ವಿಧಾನ ಏನು ಎಂಬುದನ್ನು ತಿಳಿಸದೆ ರೋಗಿಗಳನ್ನು ಕತ್ತಲಲ್ಲಿಡಲಾಗುತ್ತಿದೆ. ಸಿಎಂ ಬಿಎಸ್ವೈ ಅವರೇ ಇದು ಅನ್ಯಾಯ ಅಲ್ಲವೇ? ಎಂದು ಕೇಳಿದ್ದಾರೆ.
ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸೆಗೆ ಅವಕಾಶ ಸ್ವಾಗತಾರ್ಹ ಕ್ರಮ. ಚಿಕಿತ್ಸಾ ಶುಲ್ಕ ಕಡಿಮೆ ಮಾಡಲು ಒಪ್ಪಿರುವ ಖಾಸಗಿಯವರು ಚಿಕಿತ್ಸೆಯ ಗುಣಮಟ್ಟದಲ್ಲಿ ರಾಜಿಯಾಗದಂತೆ ನಿಗಾ ಇಡಬೇಕು. ಸೋಂಕಿತರಿಗೆ, ನೀಡುತ್ತಿರುವ ಔಷಧಿ ಮತ್ತು ಅನುಸರಿಸಲಾಗುತ್ತಿರುವ ಚಿಕಿತ್ಸಾ ವಿಧಾನದದ ಸಂಪೂರ್ಣ ಮಾಹಿತಿಯನ್ನು ಮೊದಲೇ ನೀಡಬೇಕು ಎಂದು ಹೇಳಿದ್ದಾರೆ.