ಲಕ್ನೋ, ಜೂ 30(DaijiworldNews/PY): ಗಾಂಜಾ ಸೊಪ್ಪನ್ನು ಮೆಂತೆ ಸೊಪ್ಪು ಎಂದು ತಿಳಿದು ಅಡುಗೆಯಲ್ಲಿ ಬಳಸಿ ಸೇವಿಸಿದ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಉತ್ತರ ಪ್ರದೇಶದ ಕನ್ನೌಜ್ನಲ್ಲಿ ನಡೆದಿದೆ.
ಮಿಯಾಗಂಜ್ ಗ್ರಾಮದ ನಿವಾಸಿ ಕಿಶೋರ್ ಎಂಬಾತ ನಿತೇಶ್ಗೆ ಒಣಗಿದ ಮೆಂತೆ ಸೊಪ್ಪು ಎಂದು ಹೇಳಿ ನೀಡಿದ್ದಾನೆ. ಆದರೆ, ಆ ಸೊಪ್ಪು ಗಾಂಜಾ ಸೊಪ್ಪು ಎಂದು ತಿಳಿಯದ ನಿತೇಶ್ ಅದನ್ನು ಮನೆಗೆ ಹೋಗಿ ಅತ್ತಿಗೆಗೆ ನೀಡಿದ್ದಾನೆ. ನಿತೇಶ್ನ ಅತ್ತಿಗೆ ಸೊಪ್ಪು ಎಂದು ತಿಳಿದು ಅದನ್ನು ಅಡುಗೆ ಮಾಡಿದ್ದಾರೆ. ಇದನ್ನು ಸೇವನೆ ಮಾಡಿದ ನಿತೇಶ್ನ ತಂದೆ ಓಂಪ್ರಕಾಶ್, ಮನೋಜ್ ಕಮಲೇಶ್, ನಿತೇಶ್, ಪಿಂಕಿ ಹಾಗೂ ಆರತಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನು ಗಮನಿಸಿದ ನೆರೆಹೊರೆಯವರು ಕುಟುಂಬಸ್ಥರು ಏಕೆ ಏಕಾಏಕಿ ಅಸ್ತಸ್ಥಗೊಂಡಿದ್ದಾರೆ ಎಂದು ಅವರನ್ನು ಆಸ್ಪತ್ರೆಗೆ ದಾಖಲಿಸಿ ಬಳಿಕ ಪೊಲೀಸರಿಗೆ ಈ ಬಗ್ಗೆ ತಿಳಿಸಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಅಡುಗೆಯನ್ನು ಲ್ಯಾಬ್ಗೆ ರವಾನಿಸಿದ್ದಾರೆ.
ಘಟನೆಯ ಸಂಬಂಧ ಗಾಂಜಾ ನೀಡಿದ್ದ ಕಿಶೋರ್ ಎಂಬಾತನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.