ಹೈದರಾಬಾದ್, ಜೂ 30(DaijiworldNews/PY): ಮಾಸ್ಕ್ ಧರಿಸಿ ಎಂದಿದ್ದಕ್ಕೆ ಕಚೇರಿಯ ವ್ಯವಸ್ಥಾಪಕ ಪ್ರವಾಸೋದ್ಯಮ ಇಲಾಖೆ ಮಹಿಳಾ ಸಿಬ್ಬಂದಿಯೊಬ್ಬರ ಮೇಲೆ ಹಲ್ಲೆ ಮಾಡಿದ ಘಟನೆ ನೆಲ್ಲೂರಿನಲ್ಲಿ ನಡೆದಿದೆ.
ಮಹಿಳಾ ಸಿಬ್ಬಂದಿಯು, ಕಚೇರಿಯಲ್ಲಿ ಹಾಗೂ ಸಹೋದ್ಯೋಗಿಗಳೊಂದಿಗೆ ಮಾತನಾಡುವ ಸಂದರ್ಭ ಮಾಸ್ಕ್ ಧರಿಸಿ ಎಂದಿದ್ದಾರೆ. ಮಹಿಳಾ ಸಿಬ್ಬಂದಿಯ ಮಾತಿಗೆ ಕೋಪಗೊಂಡ ಅಧಿಕಾರಿ ಮರ ಹಾಗೂ ಕಬ್ಬಿಣದ ತುಂಡಿನಿಂದ ಮಹಿಳಾ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿದ್ದಾರೆ.
ಘಟನೆಯ ಬಗ್ಗೆ ತಿಳಿಸಿದ ಪೊಲೀಸ್ ಇನ್ಸ್ಪೆಕ್ಟರ್ ಎಂ.ಎಂ.ನಾಗೇಶ್ವರಮ್ಮ ಅವರು, ಮಹಿಳಾ ಸಿಬ್ಬಂದಿ ಹಾಗೂ ಅಧಿಕಾರಿಯ ನಡುವೆ ಮಾಸ್ಕ್ ಧರಿಸುವ ವಿಚಾರಕ್ಕೆ ಮಾತುಕತೆ ನಡೆದಿದೆ. ಹಲ್ಲೆ ಮಾಡಿದವರ ಮೇಲೆ ಪ್ರಕರಣ ದಾಖಲಾಗಿದ್ದು, ಆರೋಪಿಯ ವಿರುದ್ದ ಕ್ರಮಕೈಗೊಳ್ಳಲಾಗುವುದು ಎಂದಿದ್ದಾರೆ.
ಈ ಬಗ್ಗೆ ಮಹಿಳಾ ಉದ್ಯೋಗಿ ದೂರು ನೀಡಿದ್ದು, ದೂರು ನೀಡಿದ ತಕ್ಷಣವೇ ಭಾಸ್ಕರ್ ಅವರನ್ನು ಅಮಾನತು ಮಾಡಲಾಗಿದೆ. ವಿಚಾರಣಾ ಸಮಿತಿಯನ್ನು ರಚನೆ ಮಾಡಲಾಗಿದೆ ಎಂದು ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರವೀಣ್ ಕುಮಾರ್ ತಿಳಿಸಿದ್ದಾರೆ.
ಜೂ 27ರಂದು ಈ ಘಟನೆ ನಡೆದಿದ್ದು, ಅಧಿಕಾರಿಯು, ಮಹಿಳಾ ಸಿಬ್ಬಂದಿಯನ್ನು ಬೆನ್ನಟ್ಟಿ ಹೊಡೆಯುತ್ತಿದ್ದು, ಸಹೋದ್ಯೋಗಿಗಳನ್ನು ಇದನ್ನು ತಡೆಯಲು ಯತ್ನಿಸಿರುವ ದೃಶ್ಯಾವಳಿಯು ಸಿಸಿಟಿವಿಯಲ್ಲಿ ಸೆರೆಯಾಗಿದೆ.