ಡೆಹ್ರಾಡೂನ್, ಜು. 01 (DaijiworldNews/MB) : ಭಾರತ-ಚೀನಾ ಗಡಿಯಲ್ಲಿ ಮೂರು ಆಯಕಟ್ಟಿನ ಪ್ರಮುಖ ರಸ್ತೆಗಳ ನಿರ್ಮಾಣಕ್ಕಾಗಿ ಸಂರಕ್ಷಿತ ಗಂಗೋತ್ರಿ ರಾಷ್ಟ್ರೀಯ ಉದ್ಯಾನದೊಳಗೆ 73.36 ಹೆಕ್ಟೇರ್ ಅರಣ್ಯ ಭೂಮಿಯನ್ನು ವರ್ಗಾವಣೆಗೆ ಉತ್ತರಾಖಂಡ ರಾಜ್ಯ ವನ್ಯಜೀವಿ ಸಲಹಾ ಮಂಡಳಿ ಸಮ್ಮತಿ ಸೂಚಿಸಿದೆ.
ಈ ಬಗ್ಗೆ ತಿಳಿಸಿರುವ ಪ್ರಧಾನ ಕಾರ್ಯದರ್ಶಿ (ಅರಣ್ಯ) ಆನಂದ್ ವರ್ಧನ್, ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರ ಅಧ್ಯಕ್ಷತೆಯಲ್ಲಿ ಮಂಡಳಿಯ 15 ನೇ ಸಭೆ ನಡೆದಿದ್ದು ಈ ಪ್ರಸ್ತಾಪಗಳಿಗೆ ಅನುಮೋದನೆ ಸಿಕ್ಕಿದೆ. ಇದರಿಂದಾಗಿ ಗಡಿಯ ಅಂತರ ಕಡಿಮೆ ಆಗಲಿದೆ. ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಸಿಬ್ಬಂದಿಗಳು 25 ಕಿ.ಮೀ.ವರೆಗೆ ನಡೆದು ಬರಬೇಕಾಗಿದ್ದು ಈ ಕಾಮಗಾರಿಯಿಂದ ಸಂಚಾರ ಸುಲಭವಾಗಲಿದೆ. ಇನ್ನು ಅಂತಿಮವಾಗಿ ಅನುಮತಿ ಪಡೆಯಲು ಶಿಫಾರಸನ್ನು ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ಕಳುಹಿಸಲಾಗುತ್ತದೆ ಎಂದು ತಿಳಿಸಿದ್ದಾರೆ.