ಹರಿದ್ವಾರ, ಜು 01 (Daijiworld News/MSP): ಕೊರೊನಾ ರೋಗಕ್ಕೆ ಔಷಧಿ ತಯಾರಿಸಿದ್ದಾಗಿ ಹೇಳಿಕೊಂಡಿದ್ದ ಪತಂಜಲಿ ಸಂಸ್ಥೆ ಇದೀಗ ಯೂ ಟರ್ನ್ ಹೊಡೆದಿದ್ದು, ತಮ್ಮ ಸಂಸ್ಥೆ ಔಷಧಿ ತಯಾರಿಸಿದ್ದಾಗಿ ಎಲ್ಲಿಯೂ ಹೇಳಿಕೊಂಡಿಲ್ಲ ಎಂದು ಆಯುಷ್ ಸಚಿವಾಲಯ ನೀಡಿದ ನೋಟಿಸ್ಗೆ ಉತ್ತರವಾಗಿ ಹೇಳಿದೆ.
ಕೋವಿಡ್ -೧೯ ಗೆ ಔಷಧಿ ತಯಾರಿಸಿದಾಗಿ ನಾವು ಎಲ್ಲೂ ಹೇಳಿಕೊಂಡಿಲ್ಲ, ಆದರೆ ನಾವು ಕಂಡುಹಿಡಿದ ಔಷಧಿಯಿಂದ ಕೊರೊನಾ ರೋಗಿಗಳನ್ನು ಗುಣಪಡಿಸಲಾಗಿದೆ. ಇದನ್ನು ಆಯುಷ್ ಸಚಿವಾಲಯ ನೀಡಿದ ಪರವಾನಿಗೆಯಡಿಯಲ್ಲೇ ತಯಾರಿಸಲಾಗಿದೆ ಎಂದು ಪತಂಜಲಿ ಆಯುರ್ವೇದ ಸಿಇಒ ಆಚಾರ್ಯ ಬಾಲಕೃಷ್ಣ ಅವರು ನೋಟಿಸ್ಗೆ ನೀಡಿದ ಉತ್ತರದಲ್ಲಿ ತಿಳಿಸಿದ್ದಾರೆ.
ಕೊರೊನಿಲ್ ಮತ್ತು ಸ್ವಾಸರಿ ಎಂಬ ಮಾತ್ರೆ ಮತ್ತು ಔಷಧ ಒಳಗೊಂಡಿರುವ ಕೊರೊನಾ ಕಿಟ್ ಕೇವಲ 7 ದಿನಗಳಲ್ಲಿ ಸೋಂಕಿತರನ್ನು ಗುಣಪಡಿಸಲಿದೆ ಎಂದು ಸಂಸ್ಥೆ ಈ ಹಿಂದೆ ಹೇಳಿತ್ತು. ಜಗತ್ತಿನಾದ್ಯಂತ ವಿಜ್ಞಾನಿಗಳು ಮಹಾಮಾರಿ ಕೊರೊನಾಗೆ ಔಷಧ ಪತ್ತೆ ಹಚ್ಚಲು ನಿರಂತರ ಸಂಶೋಧನೆಯಲ್ಲಿ ತೊಡಗಿರುವಾಗ ಕೊರೊನಾ ಸೋಂಕನ್ನು ಶೇಕಡಾ 100 ಗುಣಪಡಿಸಬಲ್ಲ ಆಯುರ್ವೇದ ಔಷಧಿಯನ್ನು ಅಭಿವೃದ್ಧಿಪಡಿಸಿದೆ ಎಂದು ಪತಂಜಲಿ ಹೇಳಿತ್ತು.
"ನಾವು ಅಶ್ವಗಂಧ, ಗಿಲೊಯ್ ಮತ್ತು ತುಳಸಿ ಮಿಶ್ರಣದಿಂದ ತಯಾರಿಸಲಾದ ಈ ಔಷಧಿಯನ್ನು ಕೋವಿಡ್ ರೋಗಿಗಳ ಮೇಲೆ ಕ್ಲಿನಿಕಲ್ ಪ್ರಯೋಗ ಮಾಡಿದ್ದಾರೆ. ಅವರು ಈ ಔಷಧಿಯಿಂದ ಗುಣಹೊಂದಿದ್ದಾರೆ. ನಮ್ಮ ವಿರುದ್ಧ ಪಿತೂರಿ ನಡೆಸಲಾಗಿದೆ ಮತ್ತು ಆಯುಷ್ ಸಚಿವಾಲಯವು ಬಯಸಿದರೆ ನಾವು ಇನ್ನೊಮ್ಮೆ ಈ ಪ್ರಯೋಗ ಕೈಗೊಳ್ಳಲು ಸಿದ್ದವಿದ್ದೇವೆ ಎಂದು ಸಿಇಒ ಆಚಾರ್ಯ ಬಾಲಕೃಷ್ಣ ತಿಳಿಸಿದ್ದಾರೆ.