ಚೆನ್ನೈ, ಜು 01(DaijiworldNews/PY): ಥರ್ಮಲ್ ವಿದ್ಯುತ್ ಸ್ಥಾವರದಲ್ಲಿ ಬುಧವಾರ ಬೆಳಗ್ಗೆ ಬಾಯ್ಲರ್ ಸ್ಪೋಟವಾಗಿ 6 ಕಾರ್ಮಿಕರು ಸಾವನ್ನಪ್ಪಿದ್ದು, 17 ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ತಮಿಳುನಾಡಿನ ಕಡಲೂರು ಜಿಲ್ಲೆಯಲ್ಲಿ ನಡೆದಿದೆ.
ಚೆನ್ನೈನಿಂದ ಸುಮಾರು 180 ಕಿ.ಮೀ ದೂರದಲ್ಲಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಎನ್ಎಲ್ಸಿ ಇಂಡಿಯಾ ಲಿಮಿಟೆಡ್ನ ವಿದ್ಯುತ್ ಸ್ಥಾವರದಲ್ಲಿ ಘಟನೆ ನಡೆದಿದ್ದು, ಎರಡು ತಿಂಗಳಲ್ಲಿ ಈ ವಿದ್ಯುತ್ ಸ್ಥಾವರದಲ್ಲಿ ಇದು ಎರಡನೇಯ ಸ್ಪೋಟವಾಗಿದೆ. ಮೇ ತಿಂಗಳಿನಲ್ಲಿ ಇದೇ ರೀತಿಯಾದ ಘಟನೆಯಲ್ಲಿ ಎಂಟು ಕಾರ್ಮಿಕರು ಎಂಟು ಮಂದಿ ಕಾರ್ಮಿಕರು ಗಾಯಗೊಂಡಿದ್ದರು.
ಕಂಪನಿಯು 3,940 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುತ್ತದೆ. ಸ್ಪೋಟ ನಡೆದ ಸ್ಥಾವರದಲ್ಲಿ 1,470 ಮೆಗಾವ್ಯಾಟ್ ಹೊಂದಿತ್ತು. ಕಂಪನಿಯು 15,000 ಗುತ್ತಿಗೆ ಕಾರ್ಮಿಕರನ್ನು ಒಳಗೊಂಡಂತೆ 27,000 ಉದ್ಯೋಗಿಗಳನ್ನು ಹೊಂದಿದೆ.
ಘಟನೆಯ ಬಗ್ಗೆ ಮಾಹಿತಿ ನೀಡಿದ ವಿದ್ಯುತ್ ಸ್ಥಾವರದ ಅಧಿಕಾರಿಯೊಬ್ಬರು, ಸ್ಪೋಟದಲ್ಲಿ ಗಾಯಗೊಂಡ ಎಲ್ಲವರನ್ನೂ ಆಸ್ಪತ್ರೆಗೆ ಸಾಗಿಸಲಾಗಿದ್ದು, ಘಟನೆಯ ಸಂದರ್ಭ ಬಾಯ್ಲರ್ ಕಾರ್ಯನಿರ್ವಹಿಸುತ್ತಿರಲಿಲ್ಲ. ನಾವು ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.