ಪಾಟ್ನಾ, ಜು. 01 (DaijiworldNews/MB) : ವಿವಾಹವಾದ ಕೆಲವೇ ದಿನದಲ್ಲಿ ಮದುಮಗ ಸಾವನ್ನಪ್ಪಿದ ಕಾರಣ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾದವರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಿದಾಗ 101 ಜನರಿಗೆ ಕೊರೊನಾ ದೃಢಪಟ್ಟ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ.
ಮದುಮಗ ಜೂನ್.12ರಂದು ದೆಹಲಿಯಿಂದ ಗ್ರಾಮಕ್ಕೆ ಬಂದಿದ್ದು ಜೂನ್. 15ರಂದು ಅದ್ಧೂರಿಯಾಗಿ ವಿವಾಹ ನಡೆಸಲಾಗಿತ್ತು. ಇದಾದ ಕೆಲವೇ ದಿನದಲ್ಲಿ ಮದುಮಗ ಜ್ವರ ಹಾಗೂ ಕೊರೊನಾ ಲಕ್ಷಣ ಕಾಣಿಸಿಕೊಂಡಿದ್ದು ಸಾವನ್ನಪ್ಪಿದ್ದರು. ಮೃತ ಮದುಮಗನಿಗೆ ಕೊರೊನಾ ಲಕ್ಷಣಗಳು ಇದ್ದರೂ ಕೂಡಾ ಕೊರೊನಾ ಪರೀಕ್ಷೆ ನಡೆಸದೆಯೇ ಅಂತ್ಯ ಸಂಸ್ಕಾರ ನಡೆಸಲಾಗಿದೆ.
ಇನ್ನು ಈ ಕಾರ್ಯಕ್ರಮದಲ್ಲಿದ್ದ ಎಲ್ಲರ ಕೊರೊನಾ ಪರೀಕ್ಷೆ ನಡೆಸಿದಾಗ 101 ಜನರಿಗೆ ಕೊರೊನಾ ದೃಢಪಟ್ಟಿದೆ ಎಂದು ವರದಿ ತಿಳಿಸಿದೆ.
ಮೊದಲು ವರನ 15 ಮಂದಿ ಸಂಬಂಧಿಗಳ ಕೊರೊನಾ ಪರೀಕ್ಷೆ ನಡೆಸಲಾಗಿದ್ದು ಅವರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನಲೆ ಎಲ್ಲರ ಕೊರೊನಾ ಪರೀಕ್ಷೆ ನಡೆಸಲಾಗಿದ್ದು ೧೦೧ ಮಂದಿಗೆ ಕೊರೊನಾ ದೃಢಪಟ್ಟಿದೆ.